ನ್ಯೂಸ್

ಮಳೆಗಾಲ ಸಿದ್ಧತೆಗೂ ಬರ: ಬರಗಾಲದಿಂದ ಕಲಿತಿಲ್ಲ ಪಾಠ, ನೆರೆ ಬಂದರೂ ತಪ್ಪದ ಸಂಕಷ್ಟ

ಕಳೆದೊಂದು ವರ್ಷದಿಂದ ಭೀಕರ ಬರಕ್ಕೆ ಸಿಲುಕಿ ಬಸವಳಿದಿರುವ ರಾಜ್ಯ ಈ ವರ್ಷ ಉತ್ತಮ ಮಳೆಯಾಗಲಿ ಎಂದು ಬಾಯ್ದೆರೆದು ಕಾದುಕುಳಿತಿದೆ. ಕೆಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿರುವುದು ಆಶಾಭಾವನೆ ಹೆಚ್ಚಿಸಿದೆ. ಈ ಬಾರಿ ಉತ್ತಮ ಮುಂಗಾರಿನ ಬಗ್ಗೆ ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದೆ. ನಿರೀಕ್ಷೆಗಳೆಲ್ಲವೂ ನಿಜವಾಗಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಲ್ಲಿ ಮಳೆಗಾಲ ಎದುರಿಸಲು ರಾಜ್ಯ ಎಷ್ಟರ ಮಟ್ಟಿಗೆ ಸನ್ನದ್ಧವಾಗಿದೆ? ಪ್ರತೀ ಮಳೆಗಾಲದಲ್ಲಿ ಪ್ರವಾಹ, ನೆರೆ, ಸಂಭವಿಸುವ ಹಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಭಾಯಿಸಲು ಸಿದ್ಧತೆ ಯಾವ ಮಟ್ಟಿಗೆ ಆಗಿದೆ? ಅಪಾಯಕಾರಿ ಎಂದು ಗುರುತಿಸಲಾದ ಸೂಕ್ಷ್ಮ ಪ್ರದೇಶಗಳಲ್ಲಿ ಜಿಲ್ಲಾಡಳಿತಗಳು ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಂಡಿವೆ? ನಾಡಿನ ಜನ, ಜಾನುವಾರು, ಕೃಷಿಭೂಮಿಗೆ ನೀರುಣಿಸುವ ಕೆರೆ, ಕಾಲುವೆಗಳಲ್ಲಿ ಹೂಳೆತ್ತುವ ಕೆಲಸ ಪೂರ್ಣಗೊಂಡಿದೆಯೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯಾದ್ಯಂತ ವಿಜಯವಾಣಿ ತಂಡ ನಡೆಸಿದ ರಿಯಾಲಿಟಿ ಚೆಕ್​ನ ಸಮಗ್ರ ವಿವರ ಇಲ್ಲಿದೆ.

ಹೂಳೆತ್ತದ ಜಿಲ್ಲಾಡಳಿತಗಳು

ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಕೆರೆ-ಕಟ್ಟೆಗಳು ಖಾಲಿಯಾಗಿದ್ದರೂ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ಆಗಿಲ್ಲ. ನರೇಗಾ ಯೋಜನೆಯ ನೆರವು ಪಡೆದು ಕ್ಷಿಪ್ರಗತಿಯಲ್ಲಿ ಈ ಕಾರ್ಯವನ್ನು ಕೈಗೊಳ್ಳಬೇಕಿತ್ತು. ಆದರೆ ನರೇಗಾದಡಿ ನಡೆಯುತ್ತಿರುವ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಬಹುತೇಕ ಕಡೆ ಬರಿ ಲೆಕ್ಕಕ್ಕಷ್ಟೆ ಕೆಲಸ ಮಾಡಿದಂತೆ ತೋರಿಸಲಾಗುತ್ತಿದೆ. ಹೂಳು ತೆಗೆಸಲು ಜಿಲ್ಲಾಡಳಿತಗಳೂ ಮುಂದಾಗಿಲ್ಲ. ಕೆಲ ಜಿಲ್ಲೆಗಳಲ್ಲಿ ಹೂಳೆತ್ತುವ ಕಾರ್ಯ ಆರಂಭಗೊಂಡಿದ್ದರೂ ಮುಂಗಾರು ಆರಂಭವಾಗುವುದರಲ್ಲಿ ಪೂರ್ಣಗೊಳ್ಳುವುದು ಅನುಮಾನ. ಚಾಮರಾಜನಗರ, ಚಿತ್ರದುರ್ಗ ಜಿಲ್ಲೆಯಲ್ಲಂತೂ ಒಂದೇ ಒಂದು ಹಿಡಿ ಮಣ್ಣು ಕೆರೆಗಳಿಂದ ಆಚೆ ಹೋಗಿಲ್ಲ. ಹೂಳು ತೆಗೆಸುವ ವಿಚಾರದಲ್ಲಿ ಹಲವು ಜಿಲ್ಲಾಡಳಿತಗಳು ಗಾಢ ನಿದ್ರೆಯಲ್ಲಿವೆ.

ಪ್ರವಾಹ ಎದುರಿಸಲೂ ಸಜ್ಜಾಗಿಲ್ಲ: ಕಳೆದ ವರ್ಷ ಬರ ಕಾಡಿದಂತೆ ಅದಕ್ಕೂ ಹಿಂದಿನ ಎರಡು ಮೂರು ವರ್ಷ ರಾಜ್ಯದಲ್ಲಿ ನೆರೆ ಬಹುವಾಗಿ ಬಾಧಿಸಿತು. ಅದರಲ್ಲೂ ಕೃಷ್ಣಾ ನದಿ ಪಾತ್ರದ ಜಿಲ್ಲೆಗಳ ಜನರ ಬದುಕು ನರಕಸದೃಶವಾಗಿದ್ದು, ಸಾವಿರಾರು ಮನೆಗಳು ಧರಾಶಾಯಿಯಾದವು. ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಿತ್ತು. ಜನ ತಿಂಗಳುಗಳ ಕಾಲ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತಾಗಿತ್ತು. ನೂರಾರು ಸೇತುವೆಗಳು, ಸಾವಿರಾರು ರಸ್ತೆಗಳು ಹೇಳಹೆಸರಿಲ್ಲದಂತಾಗಿದ್ದವು. ಆದರೆ ಅದರಿಂದ ಸರ್ಕಾರಗಳಾಗಲಿ, ಜಿಲ್ಲಾಡಳಿತಗಳಾಗಲಿ ಪಾಠ ಕಲಿತಂತೆ ಕಾಣುತ್ತಿಲ್ಲ. ಮತ್ತೆ ಕೆಲವು ಜಿಲ್ಲೆಗಳಲ್ಲಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿಲ್ಲ. ಇದರ ನಡುವೆ ಮಳೆ ಅಬ್ಬರಿಸಿದರೆ ಖಂಡಿತವಾಗಿ ಸಾರ್ವಜನಿಕರಿಗೆ ತೊಂದರೆ ಆಗಲಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮುಂಗಾರು ಮಳೆಯಿಂದ ಎದುರಾಗಬಹುದಾದ ಅನಾಹುತಗಳ ನಿಯಂತ್ರಣ, ತ್ವರಿತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳು ಸಭೆ ನಡೆಸಬೇಕಿದೆ. ಆದರೆ ಬಹುತೇಕ ಜಿಲ್ಲೆಗಳಲ್ಲಿ ಸಭೆಗಳನ್ನೇ ನಡೆಸಿಲ್ಲ. ಬೆಂಕಿ ಬಿದ್ದಾಗ ಬಾವಿ ತೋಡಿದರು ಎಂಬಂತೆ ಪ್ರವಾಹ ಬಂದ ಬಳಿಕವಷ್ಟೇ ಇತ್ತ ಗಮನಹರಿಸಲಾಗುತ್ತಿದೆ. ಜತೆಗೆ ಕೆರೆಗಳ ಸಂರಕ್ಷಣೆ, ರಾಜ ಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಸುರಕ್ಷತಾ ಕ್ರಮ ಕೈಗೊಂಡಿಲ್ಲ.

ಬಹುತೇಕ ಜಿಲ್ಲಾಡಳಿತಗಳು ಮಳೆಗಾಲಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳುವಲ್ಲಿ ಸೋಮಾರಿತನ ತೋರಿವೆ. ಚುನಾವಣೆಯ ಗುಂಗಿನಲ್ಲೇ ಇರುವ ಜಿಲ್ಲಾಡಳಿತಗಳು ಮಳೆಗಾಲ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಈಗಾಗಲೇ ಕೆಲವೆಡೆ ಉತ್ತಮ ಮಳೆಯಾಗುತ್ತಿದ್ದು, ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾದರೆ ಮತ್ತಷ್ಟು ಬೆಳೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮುಂಗಾರು ಆಶಾದಾಯಕ: ಕಳೆದೆ ವರ್ಷ ಮುಂಗಾರು ಕೈಕೊಟ್ಟ ಪರಿಣಾಮ ರಾಜ್ಯದ ಬಹುತೇಕ ಕಡೆ ಬರ ಕಾಡಿತ್ತು. ಆದರೆ ಈ ಬಾರಿ ಉತ್ತಮ ಮುಂಗಾರಿನ ಬಗ್ಗೆ ಹವಾಮಾನ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ. ವಾಡಿಕೆಯಂತೆ ಮೇ 19ಕ್ಕೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಿಂದ ನೈಋತ್ಯ ಮಾನ್ಸೂನ್ (ಮುಂಗಾರು ಮಳೆ) ಆರಂಭವಾಗುವ ಸಾಧ್ಯತೆ ಇದೆ. ಈ ವೇಳೆ ಮಾರುತಗಳು ಪ್ರಬಲವಾದರೆ ತಿಂಗಳಾಂತ್ಯಕ್ಕೆ ಕೇರಳಕ್ಕೆ ಪ್ರವೇಶಿಸಲಿವೆ. ಅದೇ ದಿನ ಅಥವಾ ಒಂದೆರೆಡು ದಿನದಲ್ಲಿ ಕರ್ನಾಟಕಕ್ಕೆ ಆಗಮಿಸಲಿದೆ ಎಂದು ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

ನಿರ್ಬಂಧ, ಅನುದಾನ ಕೊರತೆ: ಕೆಲವು ಜಿಲ್ಲೆಗಳಲ್ಲಿ ಜಮೀನುಗಳಿಗೆ ರೈತರು ಮಣ್ಣು ಹೊಡೆದುಕೊಳ್ಳಲು ಮುಂದಾಗಿದ್ದರೂ ಜಿಲ್ಲಾಡಳಿತಗಳು ನಿರ್ಬಂಧ ಹೇರಿವೆ. ಮತ್ತೆ ಕೆಲವೊಂದಷ್ಟು ಕಡೆ ಅವೈಜ್ಞಾನಿಕವಾಗಿ ರೈತರು ಮಣ್ಣು ತೆಗೆಯುತ್ತಿರುವುದು ಆತಂಕ ಮೂಡಿಸಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಲ್ಲೊಂದು ಅಲ್ಲೊಂದು ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ಹೂಳೆತ್ತುವ ಕಾಮಗಾರಿಗೆ ಅನುದಾನ ಕೊರತೆ ಇದೆ. ಹೂಳೆತ್ತುವ ಕಾಮಗಾರಿಗಳು ನನೆಗುದಿಗೆ ಬೀಳುತ್ತಿರುವುದರಿಂದ ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹ ಸಾಮರ್ಥ್ಯ ಕುಸಿಯುತ್ತಿದ್ದು, ಮಳೆ ವಿರಳವಾದೊಡನೆ ಬರ ಆವರಿಸುತ್ತಿದೆ.

ಚರಂಡಿ ಸ್ವಚ್ಛತೆಗೆ ಟೆಂಡರ್ ಕರೆದಿಲ್ಲ: ನಗರಗಳಲ್ಲಿ ರಾಜಕಾಲುವೆ ಒತ್ತುವರಿ, ಚರಂಡಿ ಹೂಳೆತ್ತುವ ಕಾಮಗಾರಿ ನಡೆಯದೆ ತಗ್ಗು ಪ್ರದೇಶಗಳ ಜನ ಸಂಕಷ್ಟ ಎದುರಿಸುವ ಪರಿಸ್ಥಿತಿ ಇದೆ. ಸಾಮಾನ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆದು ಸಿದ್ಧತೆ ಅವಲೋಕನ ನಡೆಯುತ್ತಿತ್ತು. ಈ ವರ್ಷ ಅದೂ ಆಗಿಲ್ಲ. ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಟೆಂಡರ್ ಕರೆದಿಲ್ಲ. ರಸ್ತೆ ಬದಿಯ ಒಣಮರ, ರೆಂಬೆ ಕತ್ತರಿಸುವ ಕೆಲಸ ಆಗಿಲ್ಲ. ಕೊಡಗು, ಬೆಳಗಾವಿ, ವಿಜಯಪುರದಂತಹ ಪ್ರವಾಹಬಾಧಿತ ಜಿಲ್ಲೆಗಳಲ್ಲೂ ಪರಿಸ್ಥಿತಿ ನಿಯಂತ್ರಣಕ್ಕೆ ಸಮರ್ಪಕ ವ್ಯವಸ್ಥೆ ಕೈಗೊಳ್ಳದಿರುವುದು ಆತಂಕ ಮೂಡಿಸಿದೆ.

ಬೆಂಗಳೂರು ಸ್ಥಿತಿ ಏನು?: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಮುಖ ಮಳೆ ಹಾನಿ ಪ್ರದೇಶ ಗುರುತಿಸಿ ರಾಜಕಾಲುವೆಗಳಲ್ಲಿ ಹೂಳೆತ್ತುವಿಕೆ, ಚರಂಡಿಗಳ ಸ್ವಚ್ಚತೆ, ಶೋಲ್ಡರ್ ಡ್ರೖೆನ್ ಕ್ಲೀನ್ ಮಾಡುವ ಕೆಲಸ ಆರಂಭಿಸಲಾಗಿದೆ. ಕೆಳಸೇತುವೆಗಳ ಬಳಿ ಮಳೆನೀರು ನಿಲ್ಲದಂತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಗಾಳಿ, ಮಳೆಗೆ ಧರೆಗುರುಳುವ ಮರ, ಟೊಂಗೆಗಳನ್ನು ತೆರವು ಮಾಡಲು ಎಂಟೂ ವಲಯಗಳಿಗೂ ತಲಾ 4 ತಂಡಗಳನ್ನು ರಚಿಸಿ ಅಗತ್ಯ ಉಪಕರಣಗಳನ್ನು ಒದಗಿಸಲಾಗಿದೆ.

ರಾಜಕಾಲುವೆಗಳ 124 ಕಡೆಗಳಲ್ಲಿ ನೀರಿನ ಮಟ್ಟ ಅಳೆಯುವ ಸಂವೇದಕಗಳನ್ನು ಅಳವಡಿಸಲಾಗಿದೆ. ಈ ವರ್ಷ ವಿಪತ್ತು ನಿರ್ವಹಣೆಗೆ 10 ಕೋಟಿ ರೂ. ಹಣ ನಿಗದಿಯಾಗಿದೆ. ಎಲ್ಲ 225 ವಾರ್ಡ್ ಗಳಲ್ಲಿ ಸೈಡ್ ಡ್ರೖೆನ್​ಗಳಲ್ಲಿ ಹೂಳೆತ್ತಲು ತಲಾ 30 ಲಕ್ಷ ರೂ. ಮೀಸಲಿಡಲಾಗಿದೆ. ಈ ಉಪಕ್ರಮದ ಹೊರತಾಗಿಯೂ ಭಾರೀ ಮಳೆ ಬಂದಲ್ಲಿ ಕೆಲವೆಡೆ ಸಮಸ್ಯೆ ಉಂಟಾಗುವ ಆತಂಕ ಇನ್ನೂ ಇದ್ದೇ ಇದೆ.

ರಿಯಾಲಿಟಿ ಚೆಕ್​ನಲ್ಲಿ ಕಂಡಿದ್ದು

. ಬೆಂಗಳೂರಿನ ಹಲವೆಡೆ ಹೂಳೆತ್ತುವ ಕಾರ್ಯ ನಡೆದಿದೆ

. ಆದರೆ ನೆರೆಪೀಡಿತ ಪ್ರದೇಶಗಳಲ್ಲಿ ಆತಂಕ ತಗ್ಗಿಲ್ಲ

. ಆರ್.ಆರ್.ನಗರ, ಪ್ರಮೋದಾ ಲೇಔಟ್​ಗೆ ನೆರೆ ಭೀತಿ

. ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳ ಹೂಳು ತೆಗೆದಿಲ್ಲ

. ಮಳೆ ಹಾನಿ ಪ್ರದೇಶಗಳ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ

? 2018ರ ನೆರೆಗೆ ಬೆಚ್ಚಿದ್ದ ಕೊಡಗಿನಲ್ಲಿ ಸಿದ್ಧತೆ ನಡೆದಿಲ್ಲ

. ರಾಮನಗರ ಜಿಲ್ಲೆಯಲ್ಲೂ ನೆರೆ ಎದುರಿಸಲು ಸಿದ್ಧತೆ ಆಗಿಲ್ಲ

. ಈ ಹಿಂದೆ ರಾಮನಗರದಲ್ಲಿ 45 ಸೇತುವೆ ಕೊಚ್ಚಿಹೋಗಿತ್ತು

. ಬೆಳಗಾವಿಯ ಘಟಪ್ರಭಾ, ಮಲಪ್ರಭಾ ಕೃಷ್ಣಾ ನದಿ ಆತಂಕ

. ನೆರೆ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

. ತಹಸೀಲ್ದಾರ್ ನೇತೃತ್ವದಲ್ಲಿ ಈಗಾಗಲೇ ಸಮಿತಿ ರಚನೆ ಆಗಿದೆ

. ಚಿಕ್ಕೋಡಿ ನೆರೆ ಪೀಡಿತ ಪ್ರದೇಶದಲ್ಲಿ ಸಿದ್ಧತೆ ಚುರುಕು.