ನ್ಯೂಸ್

ತುಂಬು ಗರ್ಭಿಣಿಯನ್ನು ಜೀವಂತ ಸುಟ್ಟ, ಮಾಡಬಾರದ್ದನ್ನು ಮಾಡಿದ್ದ ಗಂಡ!

ನವದೆಹಲಿ: ತಾನು ಮಾಡಬಾರದ್ದನ್ನು ಮಾಡಿದ್ದಲ್ಲದೆ ತುಂಬು ಗರ್ಭಿಣಿಯಾಗಿದ್ದ ಹೆಂಡತಿಯನ್ನು ಪತಿಯೇ ಜೀವಂತ ಸುಟ್ಟುಹಾಕಿರುವ ಪ್ರಕರಣವೊಂದು ವರದಿಯಾಗಿದೆ. ಬುಧವಾರ ಈ ಘಟನೆ ನಡೆದಿದ್ದು, ಸುಟ್ಟು ಕರಕಲಾದ ದೇಹದ ಮುಂದೆ ಬೀದಿನಾಯಿಗಳಿದ್ದಿದ್ದನ್ನು ಗುರುವಾರ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಈ ಅಪರಾಧ ಬೆಳಕಿಗೆ ಬಂದಿದೆ.

ಅಖಿಲೇಶ್ ನಿಷಾದ್ ಎಂಬಾತ ಆರೋಪಿ. ಆತನ ಪತ್ನಿ 24 ವರ್ಷದ ಅಂಜಲಿ ಕೊಲೆಗೀಡಾಗಿರುವ ಯುವತಿ. ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯ ನಿರ್ಜನ ಪ್ರದೇಶವೊಂದರಲ್ಲಿ ಈ ಪ್ರಕರಣ ನಡೆದಿದೆ. ಉನ್ನಾವೋದ ನಾತುಕೇಡ ನಿವಾಸಿ ಅಖಿಲೇಶ್​ ನಿಷಾದ್ ಹಾಗೂ ಕಾನ್ಪುರದ ನವಾಬ್​ಗಂಜ್ ನಿವಾಸಿ ಅಂಜಲಿಗೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು.

9 ತಿಂಗಳು ತುಂಬಿದ್ದ ಗರ್ಭಿಣಿ ಹೆಂಡತಿಯನ್ನು ಬುಧವಾರ ಆಸ್ಪತ್ರೆಗೆ ಎಂದು ಮನೆಯಿಂದ ಹೊರಡಿಸಿಕೊಂಡು ಹೋಗಿದ್ದ ಪತಿ, ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇನ್​ಫ್ಲೇಮೇಬಲ್ ಲಿಕ್ವಿಡ್​ ಬಳಸಿ ಬೆಂಕಿ ಹಚ್ಚಿದ್ದಾನೆ. ಗುರುವಾರ ಬೆಳಗೆ ಕರಕಲಾದ ದೇಹದ ಸುತ್ತ ಬೀದಿನಾಯಿಗಳು ಸೇರಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸುಳಿವುಗಳ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಆರೋಪಿಯ ಮಾಹಿತಿ ಲಭಿಸಿದೆ.

ಆರೋಪಿಯ ತಂದೆ ರಾಮ್​ ಗುಲಾಮ್​ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಆರೋಪಿ ಅಖಿಲೇಶ್​​ ಅನೈತಿಕ ಸಂಪರ್ಕ ಹೊಂದಿದ್ದ ವಿಚಾರ ಬೆಳಕಿಗೆ ಬಂದಿತ್ತು. ಈ ಸಂಬಂಧ ಅಂಜಲಿ ಆಗಾಗ ವಿರೋಧ ವ್ಯಕ್ತಪಡಿಸಿದ್ದಳು. ಅದೇ ವಿಚಾರಕ್ಕಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎಂದು ಆರೋಪಿಯ ತಂದೆ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಅನೈತಿಕ ಸಂಬಂಧಕ್ಕೆ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಕೊಲೆ ನಡೆಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)