ನ್ಯೂಸ್

ಪ್ರೀತಿ ಕುರುಡು ಅನ್ನೋದಕ್ಕೆ ಇದಕ್ಕಿಂತ ಮತ್ತೊಂದು ಸಾಕ್ಷಿ ಬೇಕಾ? ಗರ್ಭಿಣಿ ಮಗಳ ಸಾವಿಗೆ ಹೆತ್ತವರು ಕಣ್ಣೀರು!

ನವದೆಹಲಿ: ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ಕನಸಿಲ್ಲ ಅನ್ನೋದು ಕೇವಲ ಹಾಡಿಗೆ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಅನ್ವಯಿಸುತ್ತದೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಇಂತಹ ಭಯಾನಕ, ಬೆಚ್ಚಿಬೀಳಿಸೋ ಘಟನೆಗಳೇ ಜ್ವಲಂತ ಸಾಕ್ಷಿ. ಪ್ರೀತಿ-ಪ್ರೇಮದ ಹೆಸರಿನಲ್ಲಿ ಯುವಕ-ಯುವತಿಯರು ಮಾಡುವ ತಪ್ಪು ಒಂದಲ್ಲ, ಎರಡಲ್ಲ! ಬಾಲ್ಯದಿಂದ ಕಷ್ಟಪಟ್ಟು, ಮಕ್ಕಳ ಆಸೆಯಂತೆ ಬೆಳೆಸುವ ಪೋಷಕರು, ಅವರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುತ್ತಾರೆ. ಇಷ್ಟಾದರೂ ಸಹ ಉತ್ತಮ ಆಯ್ಕೆ, ಸರಿಯಾದ ಪರಿಶೀಲನೆಯಲ್ಲಿ ಎಡುವ ಹೆಣ್ಣುಮಕ್ಕಳು, ಪ್ರೀತಿ ಹೆಸರಿನಲ್ಲಿ ಮೋಸಕ್ಕೆ ಬಲಿಯಾಗುತ್ತಿರುವುದು ನಿಜಕ್ಕೂ ಶೋಚನೀಯ (Pregnant Teen).

ಪ್ರೀತಿ ಕುರುಡು ಅನ್ನೋದಕ್ಕೆ ಇದೇ ಸಾಕ್ಷಿ

ಸಲೀಮ್​ ಎಂಬ ಮುಸ್ಲಿಂ ಹುಡುಗ, ತನ್ನ ಹೆಸರನ್ನು ಸಂಜು ಎಂದು ಬದಲಿಸಿಕೊಂಡು, ಇನ್​ಸ್ಟಾಗ್ರಾಮ್​ನಲ್ಲಿ 6 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ 19 ವರ್ಷದ ಯುವತಿಯೊಂದಿಗೆ ದುರದ್ದೇಶದ ಸ್ನೇಹ ಬೆಳಸಿದ್ದ. ಆರಂಭದಲ್ಲಿ ಸೋನಿ (ಮೃತ ಹುಡುಗಿ) ಸಂಜು ಜತೆ ಸಹಜವಾಗಿ ಎಲ್ಲರಿಗೂ ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದಳೋ ಅಂತೆಯೇ ಈತನಿಗೂ ಸ್ಪಂದಿಸಿದ್ದಾಳೆ. ಆದರೆ, ದಿನೇ ದಿನೇ ಆಕೆಯನ್ನು ತನ್ನತ್ತ ಸೆಳೆದುಕೊಳ್ಳುವಷ್ಟು ಸ್ನೇಹ ಬೆಳಸಿದ ಸಂಜು, ಪ್ರೀತಿ ವಿಷಯ ಪ್ರಸ್ತಾಪಿಸಿದ್ದ. ಇದಕ್ಕೆ ಓಕೆ ಎಂದಿದ್ದ ಆಕೆ, ಗರ್ಭಿಣಿಯಾಗುವ ಹಂತವನ್ನು ಸಹ ಮೀರಿ ಬಿಟ್ಟಿದ್ದಳು.

ಮದುವೆ ಪ್ರಸ್ತಾಪಕ್ಕೆ ಸುತಾರಾಮ್ ಒಪ್ಪಲಿಲ್ಲ

ತಾನು ಗರ್ಭಿಣಿ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಆಕೆ ಸಲೀಮ್ ಬಳಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ಆತ ಒಪ್ಪಿಗೆ ನೀಡಿಲ್ಲ. ಬದಲಿಗೆ ಮಗುವನ್ನು ಹೊರತೆಗೆಸು ಎಂದು ಬಲವಂತ ಮಾಡಿದ್ದಾನೆ. ಇದ್ಯಾವುದಕ್ಕೂ ಒಪ್ಪದ ಸೋನಿ, ತನ್ನ ಕುಟುಂಬಸ್ಥರ ಬಳಿ ನಾನು ಅವನನ್ನು ಪ್ರೀತಿಸುತ್ತಿದ್ದೇನೆ. ನಾವಿಬ್ಬರು ವಿವಾಹವಾಗ್ತೀವಿ. ನಿಮ್ಮ ಅನುಮತಿ ಬೇಕಿದೆ ಎಂದು ಕೇಳಿಕೊಂಡಿದ್ದಾಳೆ. ಆದರೆ, ಆಕೆಯ ಪೋಷಕರು ಮದುವೆ ಪ್ರಸ್ತಾಪಕ್ಕೆ ಸುತಾರಾಮ್ ಒಪ್ಪಲಿಲ್ಲ. ಇದರಿಂದ ಮನನೊಂದ ಸೋನಿ, ಅವನ ಬಳಿ ವಿಪರೀತ ಜಗಳವಾಡಿದ್ದಾಳೆ.

ಹರಿಯಾಣದ ರೋಹ್ಟಕ್‌ಗೆ ಕರೆದೊಯ್ದು ಹತ್ಯೆ

ಅಂತಿಮವಾಗಿ ಪೋಷಕರು ಒಪ್ಪಿಗೆ ನೀಡ್ತಿಲ್ಲ, ಇತ್ತ ಇವನು ಸಹ ಏನು ಹೇಳ್ತಿಲ್ಲ ಎಂದು ಬೇಸರಗೊಂಡ ಸೋನಿ, ತನ್ನ ಮನೆಯಿಂದ ಒಂದಷ್ಟು ವಸ್ತುಗಳನ್ನು ತೆಗೆದುಕೊಂಡು, ಸಲೀಮ್ ಬಳಿ ಬಂದಿದ್ದಾಳೆ. ಇಲ್ಲಿಯೂ ಇಬ್ಬರ ನಡುವೆ ಮಗು ತೆಗೆಸುವ ವಿಷಯಕ್ಕೆ ಹಾಗೂ ಮದುವೆ ವಿಚಾರಕ್ಕೆ ಜಟಾಪಟಿ ನಡೆದಿದೆ. ಇದರಿಂದ ಮುಕ್ತಿ ಪಡೆಯುವ ಸಲುವಾಗಿ ಸಲೀಂ ತನ್ನ ಇಬ್ಬರು ಸ್ನೇಹಿತರ ಜತೆಗೆ ಕೈಜೋಡಿಸಿ, ಆಕೆಯನ್ನು ಹರಿಯಾಣದ ರೋಹ್ಟಕ್‌ಗೆ ಕರೆದೊಯ್ದರು, ಹತ್ಯೆಗೈದಿದ್ದಾನೆ.

ಓರ್ವ ಪತ್ತೆಗಾಗಿ ಶೋಧ

ಪ್ರೇಯಸಿಯನ್ನು ಹತ್ಯೆಗೈದ ಬಳಿಕ ಅಲ್ಲಿಯೇ ನಿರ್ಜನ ಪ್ರದೇಶದಲ್ಲಿ ಅವಳ ಶವವನ್ನು ಹೂತು, ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇದೀಗ ಆರೋಪಿ ಸಲೀಂ ಮತ್ತು ಆತನ ಒಬ್ಬ ಸ್ನೇಹಿತನನ್ನು ಬಂಧಿಸಿದ್ದು, ಮತ್ತೊಬ್ಬ ತಲೆಮರಿಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).