ಚಿತ್ರದುರ್ಗ: ಮೈಸೂರಿನ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್)ಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ(ವಿಜ್ಞಾನ)ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಾಲಿಮಾರ್/ಪ್ಲಾಸ್ಟಿಕ್ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಾವಕಾಶ ಲಭ್ಯವಿದೆ ಎಂದು ಸಂಸ್ಥೆ ಅಸಿಸ್ಟೆಂಟ್ ಟೆಕ್ನಿಕಲ್ ಆಫೀಸರ್ ಲಕ್ಷ್ಮಣ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ದೇಶಾದ್ಯಂತ ಸ್ಥಾಪಿಸಿರುವ 40 ಸಂಸ್ಥೆಗಳಲ್ಲಿ ಮೈಸೂರಿನ ನಮ್ಮ ಸಂಸ್ಥೆಯೂ ಒಂದಾಗಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು 3 ವರ್ಷದ ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ ಕೋರ್ಸ್‌ಗಳಿಗೆ ಹಾಗೂ ಸೆಕೆಂಡ್ ಪಿಯುಸಿ(ವಿಜ್ಞಾನ)ಅಥವಾ ಐಟಿಐ ಪಾಸಾದ ವಿದ್ಯಾರ್ಥಿಗಳು ಈ ಕೋರ್ಸ್‌ಗಳ 2ನೇ ವರ್ಷಕ್ಕೆ ನೇರ ಪ್ರವೇಶ ಪಡೆಯಬಹುದು ಎಂದರು.
ಈ ಕೋರ್ಸ್‌ಗಳಿಗೆ ಪ್ರವೇಶ ಪ್ರಾರಂಭವಾಗಿದೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಕೋರ್ಸ್‌ಗಳನ್ನು ಪೂರ್ಣ ಗೊಳಿಸಿದ ಅಭ್ಯರ್ಥಿಗಳಿಗೆ ಖಚಿತವಾಗಿ ಉದ್ಯೋಗ ದೊರೆಯಲಿದೆ. ಸ್ವ-ಉದ್ಯೋಗಕ್ಕೂ ಹೆಚ್ಚಿನ ಅವಕಾಶಗಳಿವೆ. ಕೋರ್ಸ್‌ಗಳ ಅಂತಿಮ ಸೆಮಿಸ್ಟರ್‌ನಲ್ಲಿ ಇಂಟರ್ನ್‌ಶಿಪ್ ಇರುತ್ತದೆ ಎಂದು ತಿಳಿಸಿದರು.
ಮೈಸೂರು ಹೆಬ್ಬಾಳದ 25 ಎಕರೆ ಪ್ರದೇಶದಲ್ಲಿ ಸಿಪೆಟ್ ಕ್ಯಾಂಪಸ್ ಇದೆ. ಭಾರತದ ಕೈಗಾರಿಕಾ ಬೇಡಿಕೆ ಮತ್ತು ಕೌಶಲ ಬೆಳವಣಿಗೆಗೆ ಅನುಗುಣವಾಗಿ ನಿರುದ್ಯೋಗಿ ಯವಜನರಿಗೂ ಉಚಿತವಾಗಿ ವೃತ್ತಿಪರ ಕೌಶಲ ತರಬೇತಿಗಳನ್ನೂ ನೀಡಲಾಗುತ್ತಿದೆ. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಊಟ, ವಸತಿ ಸೌಕರ್ಯವೂ ಉಚಿತವಾಗಿ ಒದಗಿಸಲಾಗುತ್ತದೆ ಎಂದರು. ಅಸಿಸ್ಟೆಂಟ್ ಟೆಕ್ನಿಕಲ್ ಆಫೀಸರ್ ಶಿವಪ್ಪ ಇದ್ದರು.