ಮಳೆಗಾಲ ಪೂರ್ವಸಿದ್ಧತೆ ಬಗ್ಗೆ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಧಿಕಾರಿ ಎಚ್.ವಿ ದರ್ಶನ್ ಉಪಸ್ಥಿತರಿದ್ದರು.
- ಅಪಾಯದ ಪ್ರವಾಣವನ್ನು ತಗ್ಗಿಸಲು ಕ್ರಮ
- ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಪ್ರಗತಿ
ವಿಜಯವಾಣಿ ಸುದ್ದಿಜಾಲ ಮಂಗಳೂರು
ಮುಂಬರುವ ಮಳೆಗಾಲದಲ್ಲಿ ನೆರೆ ಮತ್ತು ನೀರು ನಿಲ್ಲಬಹುದಾದ ಪ್ರದೇಶಗಳನ್ನು ಮೊದಲೇ ಗುರುತಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಗಾಲ ಪೂರ್ವಸಿದ್ಧತೆ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು.
ಜಿಲ್ಲಾಧಿಕಾರಿ ಎಚ್.ವಿ.ದರ್ಶನ್ ವಾತನಾಡಿ, ಚರಂಡಿ ಮತ್ತು ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಸಮುದ್ರ ಕೊರೆತ ಉಂಟಾಗಬಹುದಾದ 8 ಪ್ರದೇಶಗಳನ್ನು ಗುರುತಿಸಿ ಅಪಾಯದ ಪ್ರವಾಣವನ್ನು ತಗ್ಗಿಸಲು ಕ್ರಮವಹಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ವಿಪತ್ತು ನಿರ್ವಹಣೆಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ಮಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತಂಡ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮೇ ಅಂತ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ. ಸಂಭವನೀಯ ಪ್ರವಾಹ ಪೀಡಿತ 92 ಪ್ರದೇಶಗಳನ್ನು ಹಾಗೂ ಭೂಕುಸಿತ ಉಂಟಾಗಬಹುದಾದ 88 ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಮಂಗಳೂರು ನಗರದಲ್ಲಿ ರಾಜಕಾಲುವೆಗಳ ಬೃಹತ್ ಚರಂಡಿಗಳ ಹೂಳನ್ನು ಜೆಸಿಬಿ ಮೂಲಕ ತೆಗೆಯಲಾಗುತ್ತಿದ್ದು, ಈಗಾಗಲೇ ಬಹುತೇಕ ರಾಜಕಾಲುವೆಗಳ ಹೂಳು ತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ದ.ಕ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ., ಡಿ.ಸಿ.ಎಫ್. ರವಿಶಂಕರ್, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಉಪಸ್ಥಿತರಿದ್ದರು.
ಕಳೆದ ವರ್ಷ ನೆರೆ ಬಂದ ಪ್ರದೇಶಗಳು ಹಾಗೂ ಭೂಕುಸಿತವಾದ ಜನವಸತಿ ಪ್ರದೇಶಗಳಿಗೆ ಅಧಿಕಾರಿಗಳು ತಕ್ಷಣವೇ ಭೇಟಿ ನೀಡಿ ದುರಂತ ಅಪಾಯ ತಡೆಯಲು ಈಗಿಂದಲೇ ಕ್ರಮವಹಿಸಬೇಕು. ಚರಂಡಿ ರಾಜಕಾಲುವೆಗಳ ಹೂಳೆತ್ತುವ ಕಾರ್ಯ ತ್ವರಿತಗೊಳಿಸಬೇಕು. ಈ ಸಂಬಂಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.
ದಿನೇಶ್ ಗುಂಡೂರಾವ್ ಜಿಲ್ಲಾ ಉಸ್ತುವಾರಿ ಸಚಿವ