ನ್ಯೂಸ್

TTD: ತಿರುಪತಿ ಕಾಲ್ನಡಿಗೆ ಭಕ್ತರಿಗೆ ಟಿಟಿಡಿ ಎಚ್ಚರಿಕೆ..ಈ ಸೂಚನೆ ಪಾಲಿಸದಿದ್ದರೆ ಅಪಾಯ!

ತಿರುಪತಿ: ವಿಶ್ವವಿಖ್ಯಾತ ಧಾರ್ಮಿಕ ಯಾತ್ರಾಸ್ಥಳ ತಿರುಪತಿಯಿಂದ ತಿರುಮಲೆ ಶ್ರೀವೆಂಕಟೇಶ್ವರ ಸನ್ನಿಧಿಗೆ ಭಕ್ತರು ಕಾಲ್ನಡಿಗೆಯಲ್ಲಿ ಹೆಚ್ಚಾಗಿ ತೆರಳುತ್ತಾರೆ. ಆದರೆ ಇತ್ತೀಚೆಗೆ ತಿರುಮಲ ವಾಕಿಂಗ್ ಪಾತ್ ನಲ್ಲಿ ತಿರುಮಲೆಗೆ ತೆರಳುತ್ತಿದ್ದ ಭಕ್ತರಲ್ಲಿ ಕೆಲವರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಟಿಟಿಡಿ(TTD) ಕಾಲ್ನಡಿಗೆಯ ದರ್ಶನಕ್ಕೆ ಬರುವ ಭಕ್ತರಿಗೆ ಹಲವು ಸೂಚನೆಗಳನ್ನು ನೀಡಿದೆ.

ಯಾವುದೇ ಆರೋಗ್ಯ ಸಮಸ್ಯೆ ಇರುವವರು ಮೆಟ್ಟಿಲು ಹತ್ತಬಾರದು. ಇನದನು ಆರೋಗ್ಯವಂತರೂ ಬೆಟ್ಟ ಹತ್ತುವಾಗ ಅಸ್ವಸ್ಥರಾದರೆ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ವೈದ್ಯಕೀಯ ಸೌಲಭ್ಯಗಳು ಎಲ್ಲೆಲ್ಲಿ ಲಭ್ಯ ಎಂಬಿತ್ಯಾದಿ ಮಾಹಿತಿಗಳನ್ನು ಟಿಟಿಡಿ ನೀಡಿದೆ.

ಟಿಟಿಡಿ ಸೂಚನೆಯಂತೆ 60 ವರ್ಷ ಮೇಲ್ಪಟ್ಟ ವೃದ್ಧರು, ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾ, ಮೂರ್ಛೆ, ಕೀಲು ರೋಗಗಳಿರುವ ಭಕ್ತರು ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ಬರಬಾರದು.

ಅದೇ ರೀತಿ ಸ್ಥೂಲಕಾಯದ ಭಕ್ತರು, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ತಿರುಮಲಗೆ ನಡೆದುಕೊಂಡು ಬರುವುದು ಸೂಕ್ತವಲ್ಲ. ತಿರುಮಲ ಬೆಟ್ಟವು ಸಮುದ್ರ ಮಟ್ಟದಿಂದ ತುಂಬಾ ಎತ್ತರದಲ್ಲಿದೆ ಆದ್ದರಿಂದ ಆಮ್ಲಜನಕದ ಮಟ್ಟವು ಕಡಿಮೆಯಾಗಿರುತ್ತದೆ. ಕಾಲ್ನಡಿಗೆಯಲ್ಲಿ ಬರುವುದು ತುಂಬಾ ಒತ್ತಡದಿಂದ ಕೂಡಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಅಸ್ತಮಾ ಉಲ್ಬಣಗೊಳ್ಳುವ ಸಂಭವವಿರುವವರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.

ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಭಕ್ತರು ತಮ್ಮೊಂದಿಗೆ ಒಂದೆರಡು ದಿನಕ್ಕೆ ಆಗುವಷ್ಟು ಔಷಧಿಗಳನ್ನು ತರಬೇಕು. ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಏನಾದರೂ ತೊಂದರೆಯಾದರೆ ಅಲಿಪಿರಿ ಪಾದಚಾರಿ ಮಾರ್ಗದಲ್ಲಿ 1500 ನೇ ಮೆಟ್ಟಿಲು ಗಾಳಿಗೋಪುರದ ಬಳಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಟಿಟಿಡಿ ಸೂಚಿಸಿದೆ.