ವಿಜಯಪುರ: ಜೂನ್ ತಿಂಗಳು ಮುಗಿಯುತ್ತಾ ಬಂದರೂ ರಾಜ್ಯದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಪರಿಣಾಮ ಉತ್ತರ ಕರ್ನಾಟಕ ಭಾಗದಲ್ಲಿ ಬರಗಾಲದ ಭೀತಿ ಎದುರಾಗಿದೆ. ಜನರು ಮಳೆ ಬರಲಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ. ಅಲ್ಲದೆ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲು ವಿವಿಧ ಆಚರಣೆ ಮಾಡುತ್ತಿದ್ದಾರೆ.
ಇದೀಗ ಜಿಲ್ಲೆಯಲ್ಲಿ ಸರಿಯಾಗಿ ಮಳೆ ಆಗದೇ ಇರುವುದರಿಂದ ಮುದ್ದೇಬಿಹಾಳ ತಾಲೂಕಿನ ಹರಿಂದ್ರಾಳ ಗ್ರಾಮದ ಜನರು ಗೊಂಬ್ಬೆಗಳಿಗೆ ಮದುವೆ ಮಾಡಿದ್ದಾರೆ. ಗ್ರಾಮದ ಬಾಲಕ, ಬಾಲಕಿಯನ್ನು ಜತೆಯಲ್ಲಿ ಕೂರಿಸಿ, ಅವರ ಕೈಗಳಲ್ಲಿ ಗೊಂಬೆಗಳನ್ನು ಕೊಟ್ಟು ಮದುವೆ ಮಾಡಲಾಗಿದೆ. ಬಳಿಕ ವಾಲಗ ಸದ್ದಿನೊಂದಿಗೆ ಗೊಂಬೆಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಗೊಂಬೆಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಗ್ರಾಮದ ಜನರಲ್ಲಿದೆ.
ಬೆಳಗಾವಿ: ಜಿಲ್ಲೆಯಲ್ಲಿ ವರುಣನ ಆಹ್ವಾನಕ್ಕೆ ರೈತರ ಕಸರತ್ತು ಮುಂದುವರೆದಿದೆ. ಗೋಕಾಕ್ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಮಳೆಗೆ ಪ್ರಾರ್ಥಿಸಿ ರೈತರು ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ.
ಗ್ರಾಮದ ಜನ ಸೇರಿಕೊಂಡು ಗಂಡು-ಹೆಣ್ಣು ಕತ್ತೆಗಳನ್ನ ತಂದು ಶಾಸ್ತ್ರೋಕ್ತವಾಗಿ ಮದುವೆ ಮಾಡಿ, ಊರ ತುಂಬ ಮೆರವಣಿಗೆ ಮಾಡಿದ್ದಾರೆ. ಸಂಪ್ರದಾಯಬದ್ಧವಾಗಿ ಕತ್ತೆಗಳಿಗೆ ಮದುವೆ ಮಾಡಿದರೆ ಮಳೆಯಾಗುತ್ತದೆ ಎಂಬುದು ಈ ಭಾಗದ ಜನರ ನಂಬಿಕೆ. ಜಿಲ್ಲೆಯಾದ್ಯಂತ ಹಲವು ಕಡೆ ನಿತ್ಯವೂ ಕತ್ತೆ ಮದುವೆ, ವೃತ, ಜಪ ನಡೆಯುತ್ತಿದ್ದರೂ ಮಳೆರಾಯ ಮಾತ್ರ ಕೃಪೆ ತೋರಿಲ್ಲ.