ನ್ಯೂಸ್

ಪ್ರಾರ್ಥನೆ ಮತ್ತು ಯೇಸು ಕ್ರಿಸ್ತ

ಸುದೀಪ್​ ವಿ.ಎನ್​
ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ ನಿಮಗೆ ತೆರೆಯುವುದು ....ನಿಮ್ಮಲ್ಲಿ ಯಾರಾದರೂ ರೊಟ್ಟಿ ಕೇಳುವ ಮಗನಿಗೆ ಕಲ್ಲನ್ನು ಕೊಡುವನೇ? ಹಾಗಾದರೆ, ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲಿರಾದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನ ಬಳಿ ಬೇಡುವವನಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯ ವರಗಳನ್ನು ಕೊಡುವವರಲ್ಲವೇ?. ಕ್ರಿಸ್ತನ ಪ್ರಕಾರ, ಇದೇ ಪಾರ್ಥನೆಯ ನೆಲೆ ಮತ್ತದರ ಜೀವದ್ರವ್ಯ. ಆದರೆ, ನೈಜ ಪ್ರಾರ್ಥನೆಗೆ ಸ್ಪಟಿಕದಂತಹ ನಿರ್ಮಲ ಮನಸ್ಸು, ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಗಳು ಅಗತ್ಯ.

ಜಗತ್ತಿನ ಅನೇಕ ದಾರ್ಶನಿಕರು, ದೇವಮಾನವರ ಹಾಗೆ ಕ್ರಿಸ್ತ ಪ್ರಾರ್ಥಿಸದ ಗಳಿಗೆಯೇ ಇರಲಿಲ್ಲ. ತಾನು ಕೈಗೊಳ್ಳುವ ಪ್ರತಿ ಅಪ್ರತಿಮ ಕಾಯಕದ ವೇಳೆ ಪಿತದೇವರನ್ನು ಪ್ರಾರ್ಥಿಸುತ್ತಿದ್ದ. ಸಹಸ್ರಾರು ಜನರಿಗೆ ರೊಟ್ಟಿ ಮೀನು ಬಡಿಸುವ ಮೊದಲು, ಕುಷ್ಟ ರೋಗಿಗಳನ್ನು ಗುಣಪಡಿಸುವ ಮೊದಲು, ಕೊನೆಗೆ, ತಾನು ಶಿಲುಬೆ ಏರಲಿರುವ ಹಿಂದಿನ ರಾತ್ರಿ ಜೆರೋಸಲೇಮಿನ ಜೆತ್ಸೆಮನಿ ತೋಟದಲ್ಲಿ ರಕ್ತದ ಬೆವರು ಬಸಿಯುವಂತೆ ಪ್ರಾರ್ಥಿಸುತ್ತ ಮಾರನೆ ದಿನದ ತನ್ನ ಪ್ರಾಣ ಬಲಿಗೆ ತನ್ನ ಪಿತದೇವರೊಡನೆ ಅನುಸಂಧಾನ ಜರುಗಿಸಿದ್ದ. ಇಂದು ಜಗತ್ತಿನ ಕ್ರೖೆಸ್ತ ಸಮುದಾಯವೆಲ್ಲ ಪಠಿಸುವ ‘ಪರಲೋಕದಲ್ಲಿರುವ ನಮ್ಮ ತಂದೆಯೇ’ ಎಂಬ ಪ್ರಾರ್ಥನೆಯನ್ನು ಕಲಿಸಿದ. ತಂತಮ್ಮ ತಪ್ಪು ಮತ್ತು ದೋಷಗಳನ್ನು ಮನ್ನಿಸೆಂದು ಮುಕ್ತವಾಗಿ ಕ್ಷಮೆ ಯಾಚಿಸುವುದು, ಪ್ರಲೋಭನೆಗಳಿಗೆ ಒಳಗಾಗದಂತೆ ಬದುಕು ಸಾಗಿಸುವುದನ್ನು ಬಯಸುವುದೇ ಕ್ರೖೆಸ್ತ ಪ್ರಾರ್ಥನೆ ಮತ್ತು ಆರಾಧನೆಯ ಪ್ರಮುಖ ಹಂದರವಾಗಿದೆ. ಅದು ಹೇಗಿರಬೇಕೆಂದು ದಾರ್ಶನಿಕರೊಬ್ಬರು ಹೀಗೆ ತಿಳಿಹೇಳಿದ್ದಾರೆ:

ಪ್ರಾರ್ಥಿಸದಿರು ಬೆಟ್ಟ ಗಿಡ್ಡವಾಗಲೆಂದು; ಪ್ರಾರ್ಥಿಸು, ಬೆಟ್ಟವೇರಲು ಶಕ್ತಿ ನೀಡೆಂದು. ಪ್ರಾರ್ಥಿಸದಿರು ಭಾರ ಒಲ್ಲೆನೆಂದು; ಪ್ರಾರ್ಥಿಸು ಆ ಭಾರ ಹೊರುವ ಬೆನ್ನು ಕೊಡೆಂದು.