ಚೌಳಹಿರಿಯೂರು: ಪಠ್ಯದಷ್ಟೇ ಮುಖ್ಯವಾದ ಸಹಪಠ್ಯೇತರ ಚಟುವಟಿಕೆಗಳಾದ ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿ ಸ್ಥಳೀಯರ ಸಹಕಾರದಿಂದ ಯಶಸ್ವಿಯಾಗಿ ನಿಯಮಾನುಸಾರ ಆಚರಿಸಲಾಗುತ್ತಿದೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಧನಪಾಲ್ ನಾಯ್ಕ ತಿಳಿಸಿದರು.
ಚೌಳಹಿರಿಯೂರಿನ ಕೆಪಿಎಸ್ ಮಾಧ್ಯಮಿಕ ಶಾಲಾ ಆವರಣದಲ್ಲಿ ಶ್ರೀ ಸೋಮೇಶ್ವರ ಪ್ರೌಢಶಾಲೆಯಿಂದ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕಲೋತ್ಸವದಲ್ಲಿ ಮಾತನಾಡಿ, ಗ್ರಾಮದಲ್ಲಿ ಕೆಪಿಎಸ್ ಮತ್ತು ಡಾ. ಅಂಬೇಡ್ಕರ್ ವಸತಿ ಶಾಲೆ ಉತ್ತಮವಾಗಿ ನಡೆಯುತ್ತಿವೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಲಿಂಗರಾಜ್ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮಕ್ಕಳ ಪ್ರವೇಶ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅತಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಾರೆ. ಇಂತಹ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಅನಿತಾ ಮಲ್ಲೇಶಪ್ಪ ಉಪಾಧ್ಯಕ್ಷ ತಿಮ್ಮಪ್ಪ ಬೋವಿ, ವೈ.ಟಿ.ಓಂಕಾರಪ್ಪ, ಶಿವಶಂಕರ್, ಹಾಲಾರಾಧ್ಯ ಮಾತನಾಡಿದರು. ಶಿವಗಂಗಾಗಿರಿ ಸಂಸ್ಥೆ ಸಂಸ್ಥಾಪಕ ವನಭೋಗಿಹಳ್ಳಿ ಮರುಳಪ್ಪ, ಅಂಬೇಡ್ಕರ್ ವಸತಿ ಶಾಲೆ ಪ್ರಾಚಾರ್ಯ ಧನರಾಜ್, ಕೆಪಿಎಸ್‌ನ ಹಿರಿಯ ಶಿಕ್ಷಕ ರುದ್ರೇಶ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೃಷ್ಣಮೂರ್ತಿ ಮನೋಹರ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
ಸೋಮೇಶ್ವರ ಪ್ರೌಢಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಮತ್ತು ರೈತಗೀತೆ ಹಾಡಿದರು.