ಮೈಸೂರು: ಬಸವ ಮಾರ್ಗ ಸಂಸ್ಥೆ ದತ್ತು ಪಡೆದ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದಿಂದ ಮಾನಸ ಗಂಗೋತ್ರಿಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶುಕ್ರವಾರ ದಕ್ಷಿಣ ವಲಯದ ಲಕ್ಷ್ಮೀಪುರಂ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದಕ್ಷಿಣ ವಲಯದ 35ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡ್ಡಿದ್ದರು. ವಿವಿಧ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ಜಾನಪದ ನೃತ್ಯದಲ್ಲಿ ಮಾನಸಾ ಮತ್ತು ತಂಡ ಪ್ರಥಮ, ಪ್ರಬಂಧ ಸ್ಪರ್ಧೆಯಲ್ಲಿ ತನುಜಾ ಪ್ರಥಮ, ಗಜಲ್ ಗಾಯನದಲ್ಲಿ ಮೊಹಮ್ಮದ್ ಇಬ್ರಾಹಿಮ್ ಪ್ರಥಮ, ಮಿಮಿಕ್ರಿಯಲ್ಲಿ ಸಿ.ಸಿದ್ದೇಶ್ ದ್ವಿತೀಯ ಹಾಗೂ ಭರತ ನಾಟ್ಯದಲ್ಲಿ ಕೀರ್ತನಾ ತೃತೀಯ ಸ್ಥಾನ ಪಡೆಯುವ ಮೂಲಕ ಬಹುಮಾನ ಪಡೆದರು.
ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಬಸವ ಮಾರ್ಗ ಸಂಸ್ಥೆಯ ಸಂಸ್ಥಾಪಕ ಬಸವಣ್ಣ, ಮಕ್ಕಳು ಕೇವಲ ಪಠ್ಯದ ವಿಷಯಕ್ಕೆ ಮಾತ್ರ ಸೀಮಿತವಾಗಬಾರದು. ಪಠ್ಯೇತರ ಚಟುವಟಿಕೆಯಲ್ಲೂ ಕೂಡ ಪಾಲ್ಗೊಳ್ಳಬೇಕು. ಕೆಲ ವಿದ್ಯಾರ್ಥಿಗಳು ವೇದಿಕೆಗಳು ಎಂದರೆ ಭಯದಿಂದ ಹಿಂದೆ ಸರಿಯುತ್ತಾರೆ. ಸೋಲು-ಗೆಲುವುಗಳ ಬಗ್ಗೆ ಚಿಂತೆ ಮಾಡಬಾರದು. ಕೇವಲ ನಾವು ಭಾಗವಹಿಸುವುದರ ಕಡೆ ಮಾತ್ರ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೆ ಪ್ರತಿದಿನ ಸಂಜೆ ಶಾಲೆ ಬಿಟ್ಟ ಬಳಿಕ ನಾಟಕ ತರಬೇತಿ ನೀಡಲೆಂದು ಬಸವಮಾರ್ಗ ಸಂಸ್ಥೆ ನಾಟಕ ತರಬೇತುದಾರರನ್ನು ನೇಮಕ ಮಾಡಿದೆ. ಶಾಲೆಯ ಆಸಕ್ತ ಮಕ್ಕಳು ತರಬೇತಿಯಲ್ಲಿ ಅತ್ಯಂತ ಉತ್ಸುಕವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅದರಂತೆ ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡು ಜಾನಪದ ನೃತ್ಯದಲ್ಲಿ ಮಾನಸಾ ಮತ್ತು ತಂಡ ಪ್ರಥಮ ಬಹುಮಾನ ಪಡೆದಿದ್ದಾರೆ. ಇದು ನಿಜಕ್ಕೂ ಸಂತಸದ ವಿಷಯವಾಗಿದೆ. ಇದರಲ್ಲಿ ನಾಟಕ ತರಬೇತುದಾರ ವಿಶ್ವನಾಥ್ ಪಾತ್ರ ದೊಡ್ಡದಿದೆ ಎಂದರು.
ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ಬಸವ ಮಾರ್ಗ ಸಂಸ್ಥೆ ದತ್ತು ಪಡೆದಿದ್ದು, ಶಾಲೆಯ ಮಕ್ಕಳಿಗೆ ಸರ್ವತೋಮುಖ ವಿಕಸಕ್ಕೆ ಹಲವಾರು ಕೆಲಸಗಳನ್ನು ಮಾಡಲಾಗುತ್ತಿದೆ. ಶಾಲೆಗೆ ಬೇಕಾದ ಅಗತ್ಯ ಮೂಲಸೌಕರ್ಯ ಕಲ್ಪಿಸುತ್ತಿದೆ. ಒಬ್ಬೊಬ್ಬ ವಿದ್ಯಾರ್ಥಿಗಳನ್ನೂ ಪ್ರತ್ಯೇಕವಾಗಿ ಗುರುತಿಸಿ, ಆ ವಿದ್ಯಾರ್ಥಿ ಯಾವ ಕ್ಷೇತ್ರದಲ್ಲಿ ಆಸಕ್ತಿವೊಂದಿರುತ್ತಾನೋ ಆ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದಕ್ಕೆ ಬೇಕಾದ ತರಬೇತಿಯನ್ನು ವಿಷಯ ತಜ್ಞರಿಂದಲೇ ಕೊಡಿಸಲಾಗುತ್ತಿದೆ. ಆ ಮೂಲಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸರ್ವತೋಮು ಬೆಳವಣಿಗೆಗೆ ಬಸವ ಮಾರ್ಗ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಆರ್. ಚಂದ್ರಾ, ದೈಹಿಕ ಶಿಕ್ಷಣ ಶಿಕ್ಷಿಕಿ ಜಿ.ಸಾವಿತ್ರಿ, ಸಹ ಶಿಕ್ಷಕಿ ಬಿ.ಆರ್.ವಾಣಿ, ನಾಟಕ ತರಬೇತುದಾರ ವಿಶ್ವನಾಥ್ ಇತರರು ಇದ್ದರು.