ನ್ಯೂಸ್

ಉಪವಾಸದ ಪವಿತ್ರ ಪರ್ವ ಪ್ರಥಮ ಏಕಾದಶಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಭಾರತೀಯರ ಹಬ್ಬಹರಿದಿನಗಳಲ್ಲಿ ಅತ್ಯಂತ ಮುಖ್ಯವಾದ ಒಂದು ಹಬ್ಬ ಪ್ರಥಮೈಕಾದಶಿ. ಆಷಾಢಮಾಸದ ಶುಕ್ಲಪಕ್ಷದಲ್ಲಿ ಬರುವ ಈ ಏಕಾದಶಿಯನ್ನು ಉಪವಾಸದ ಹಬ್ಬ, ಮಹೈಕಾದಶೀ, ಸಾಯಣೀ ಎಂಬ ನಾಮಧೇಯಗಳಿಂದಲೂ ಕರೆಯುವ ವಾಡಿಕೆಯುಂಟು. ಎಲ್ಲ ವರ್ಣಗಳು ಮತ್ತು ಆಶ್ರಮಗಳ ಜನರೂ ಮತ್ತು ವೈಷ್ಣವ, ಶೈವ ಮುಂತಾದ ಎಲ್ಲ ಮತಪಂಥಗಳ ಶಿಷ್ಟರೂ ಆಚರಿಸುವ ಅತಿ ಮುಖ್ಯವಾದ ಪರ್ವ ಇದಾಗಿದೆ.

ಇದು ಎಲ್ಲ ಏಕಾದಶಿಗಳಲ್ಲಿ ಅತ್ಯಂತ ಮುಖ್ಯವಾದುದು. ಉಳಿದ ಏಕಾದಶೀ ಪರ್ವಗಳನ್ನು ಯಥಾವಿಧಿಯಾಗಿ ಆಚರಿಸಲು ಯಾರಿಗೆ ಸಾಧ್ಯವಿಲ್ಲವೋ ಅವರು ಈ ಏಕಾದಶಿಯನ್ನಾದರೂ ಆಚರಿಸಬೇಕು ಎಂಬ ನಿಯಮವುಂಟು. ಪ್ರಥಮೈಕಾದಶಿ ಎಂದರೆ ಮೊದಲ ಏಕಾದಶೀ. ವರ್ಷಗಳಲ್ಲಿ ಬರುವ ಮುಖ್ಯ ವ್ರತಗಳಲ್ಲಿ ಒಂದಾದ ಚಾತುರ್ವಸ್ಯ ಎಂಬ ವ್ರತಕ್ಕೆ ಹಿಂದೆ ಹತ್ತಿರದಲ್ಲಿರುವ ಏಕಾದಶಿಯಾದ್ದರಿಂದಲೂ ಇದು ಪ್ರಥಮೈಕಾದಶೀ ಎನಿಸುತ್ತದೆ.

ಪ್ರಥಮೈಕಾದಶೀಪರ್ವಕ್ಕೆ ಶಯನೈಕಾದಶೀ ಎಂಬ ಹೆಸರು ಶಾಸ್ತ್ರಗಳಲ್ಲಿ ಪ್ರಸಿದ್ಧವಾಗಿದೆ. ಶಯನ ಎಂದರೆ ಮಲಗುವುದು, ನಿದ್ರಿಸುವುದು. ಇಲ್ಲಿ ನಿದ್ರಿಸಬೇಕಾದವರು ವ್ರತವನ್ನು ಆಚರಿಸುವ ಸಾಧಕರಲ್ಲ. ಜಗತ್ಪ್ರಭುವೂ, ಈ ಪರ್ವದಲ್ಲಿ ವಿಶೇಷವಾಗಿ ಆರಾಧಿಸಲ್ಪಡಬೇಕಾದ ಮಹಾಪ್ರಭುವೇ ಆದ ಮಹಾವಿಷ್ಣುವಿನ ನಿದ್ರೆಯನ್ನು ಕುರಿತು, ‘ಆತನು ಆಷಾಢಶುಕ್ಲದ್ವಾದಶಿಯಲ್ಲಿ ಶಯನಿಸುತ್ತಾನೆ ಮತ್ತು ಕಾರ್ತಿಕಶುಕ್ಲದ್ವಾದಶಿಯಲ್ಲಿ ಎಚ್ಚರಗೊಳ್ಳುತ್ತಾನೆ. ಈ ಮಧ್ಯೆ ಭಾದ್ರಪದಮಾಸದಲ್ಲಿ ಅವನಿಗೆ ಮಗ್ಗುಲಿಗೆ ತಿರುಗುವಿಕೆಯೂ ಉಂಟು’ ಎಂದು ಶಾಸ್ತ್ರಗಳು ಹೇಳುತ್ತವೆ. ಹೀಗೆ ವಿಷ್ಣುವು ನಿದ್ರಾಮುದ್ರೆಯನ್ನು ಹೊಂದುವ ಆಷಾಢಶುಕ್ಲದ್ವಾದಶಿಯ ಹಿನ್ನೆಲೆಯಲ್ಲಿ, ಅದರ ಹಿಂದಿನ ದಿವಸ ಬರುವ ಶ್ರೇಷ್ಠ ಪರ್ವವಾದ್ದರಿಂದ ಇದಕ್ಕೆ ‘ಶಯನೈಕಾದಶೀ’ ಎಂಬ ನಾಮಧೇಯ ಸ್ಪಷ್ಟವಾಗಿ ಹೊಂದಿಕೆಯಾಗುತ್ತದೆ.

ವ್ರತವನ್ನು ಆಚರಿಸುವ ಕ್ರಮ: ಪ್ರಥಮೈಕಾದಶಿ ವ್ರತವನ್ನು ಆಚರಿಸುವವರು ದಶಮಿ, ಏಕಾದಶೀ, ದ್ವಾದಶೀ ಮೂರು ದಿನಗಳೂ ವ್ರತವು ನಿರ್ದುಷ್ಟವಾಗಿ ನೆರವೇರುವಂತೆ ಮಾಡಬೇಕೆಂದು ಸಂಕಲ್ಪಪೂರ್ವಕವಾಗಿ ನಾರಾಯಣನನ್ನು ಪ್ರಾರ್ಥಿಸಬೇಕು. ದಶಮಿಯ ದಿವಸವೂ ಏಕಭುಕ್ತವನ್ನು ಆಚರಿಸಬೇಕು. ಬ್ರಹ್ಮಚರ್ಯದಲ್ಲಿರಬೇಕು. ಕಂಚಿನ ತಟ್ಟೆಯಲ್ಲಿ ಭೋಜನ ಮಾಡಬಾರದು. ಹಗಲು ನಿದ್ರೆ ಮಾಡಬಾರದು. ಮಿತಿಮೀರಿ ಭೋಜನ, ಜಲಪಾನಗಳನ್ನು ಮಾಡಬಾರದು. ಮಾಂಸಾಹಾರ ನಿಷಿದ್ಧ. ತಾಂಬೂಲ ಸೇವನೆ, ಜೂಜು, ಮದ್ಯಪಾನ, ಅಸತ್ಯಭಾಷಣ ಇವುಗಳೂ ಕೂಡದು. ನೆಲದ ಮೇಲೆ ಹಾಸಿದ ಹಾಸಿಗೆಯ ಮೇಲೆ ಮಲಗಬೇಕು. ಏಕಾದಶಿಯ ದಿನ

ಪ್ರಾತಃಕಾಲ ಸ್ನಾನಾಹ್ನಿಕಗಳ ನಂತರ ದರ್ಭೆಪವಿತ್ರವನ್ನು ಧರಿಸಿ ಉತ್ತರಾಭಿಮುಖವಾಗಿ ಜಲಪೂರ್ಣವಾದ ತಾಮ್ರಕಲಶವನ್ನು ಹಿಡಿದುಕೊಂಡು, ‘ಇಂದು ಉಪವಾಸ ಮಾಡುವೆನು. ನಾಳೆಯ ದಿನ ಪಾರಣೆ ಮಾಡುವನು. ಇದಕ್ಕೆ ಅನುಗ್ರಹ ಮಾಡೈ ಅಚ್ಯುತ’ ಎಂದು ಸಂಕಲ್ಪ ಮಾಡಿ ಭಗವಂತನನ್ನು ಪ್ರಾರ್ಥಿಸಬೇಕು ಅಥವಾ ಈ ಪ್ರಾರ್ಥನೆಯೊಡನೆ ಶ್ರೀಹರಿಗೆ ಪುಷ್ಪಾಂಜಲಿಯನ್ನು ಸಮರ್ಪಿಸಬೇಕು. ಪೂರ್ಣವಾಗಿ ಉಪವಾಸ ಮಾಡಲಾಗದವನು ತಾನು ಯಾವ ಅನುಕಲ್ಪವನ್ನು ಅನುಸರಿಸುತ್ತಾನೆಯೋ ಅದನ್ನು ಸಂಕಲ್ಪದಲ್ಲಿ ಹೇಳಿಕೊಳ್ಳಬೇಕು. ಅಲಂಕೃತವಾದ ಮಂಟಪದಲ್ಲಿ ಶ್ರೀಹರಿಗೆ ಸವೋಪಚಾರಗಳನ್ನೂ ಸಮರ್ಪಿಸಬೇಕು. ಭಗವಂತನಿಗೆ ಜಯಕಾರವನ್ನು ಹೇಳಬೇಕು. ರಾತ್ರಿಯೆಲ್ಲ ಯಥಾಶಕ್ತಿ ಜಾಗರಣೆ ಮಾಡಿ ಭಗವಂತನ ಸ್ತುತಿ, ಕೀರ್ತನೆಗಳಲ್ಲಿ ಕಾಲವನ್ನು ವಿನಿಯೋಗಿಸಬೇಕು. ಹೀಗೆ ಸಂಕಲ್ಪಪೂರ್ವಕ ಮಾಡುವುದು ಏಕಾದಶೀ ವ್ರತ ಎನಿಸುವುದು. ಮಾರನೆಯ ದಿನ ಪ್ರಾತಃಕಾಲದಲ್ಲಿ ದೇವಪೂಜೆ ಮಾಡಿ ವ್ರತ ಉದ್ಯಾಪನೆ ಮಾಡಬೇಕು. ವ್ರತವು ಪೂರ್ಣವಾಗುವವರೆಗೆ ಮತ್ತೊಂದು ವ್ರತವನ್ನು ಕೈಗೊಳ್ಳಕೂಡದು.

ಏಕಾದಶಿಯಂದು ಮುಖ್ಯವಾಗಿ ಆಚರಿಸಬೇಕಾದ ಮೂರು ಪುಣ್ಯಕಾರ್ಯಗಳು - ಹಗಲು-ರಾತ್ರಿಗಳ ಉಪವಾಸ, ಜಾಗರಣೆ ಮತ್ತು ನಾರಾಯಣನ ಪೂಜೆ. ಇವುಗಳಲ್ಲಿ ಭಗವಂತನ ಆರಾಧನೆಯನ್ನು ವಿಶೇಷವಾಗಿ ಮಾಡಬೇಕು. ದಶಮಿ ಏಕಾದಶೀ ದ್ವಾದಶಿಗಳಲ್ಲಿ ಈ ಮಧ್ಯದ ತಿಥಿ ನಾರಾಯಣನ ಪೂಜೆಗೆ ಅತ್ಯಂತ ಪ್ರಶಸ್ತವಾದದ್ದು. ವಿಷ್ಣುದೇವರಿಗೆ ಸಂಬಂಧಪಟ್ಟ ಕೇಂದ್ರಗಳು ಅಂದು ಸಹಜವಾಗಿ ವಿಕಾಸ ಹೊಂದುತ್ತವೆ. ಅಂದು ಪ್ರಕೃತಿಯು ಸಾಧಕನಿಗೆ ಅಧ್ಯಾತ್ಮಮಾರ್ಗದಲ್ಲಿ ಒಳಮುಖವಾದ ಮುನ್ನಡೆಗೆ ಸಹಾಯ ಮಾಡಿಕೊಡುತ್ತದೆ.

ಸಾಮಾನ್ಯವಾಗಿ ಜನರು ಹಗಲು ಕೆಲಸ ಮಾಡಿ ರಾತ್ರಿಯನ್ನು ನಿದ್ರೆಯಲ್ಲಿ ಕಳೆಯುತ್ತಾರೆ. ನಿದ್ರೆ ದೇಹದ ಆರೋಗ್ಯಕ್ಕೆ ಒಳ್ಳೆಯದು. ಆದರೆ ಏಕಾದಶಿಯ ರಾತ್ರಿಸಮಯವನ್ನು ಜಾಡ್ಯದ ನಿದ್ರೆಯಲ್ಲಿ ಪೋಲು ಮಾಡದೆ ಬ್ರಹ್ಮಸಮಾಧಿಗೆ ಸಹಾಯ ಮಾಡುವ ದೈವಭಾವದಲ್ಲಿರುವುದಕ್ಕೋಸ್ಕರ ಜಾಗರಣೆ ಮಾಡಬೇಕೆಂದು ಶಾಸ್ತ್ರಗಳು ವಿಧಿಸುತ್ತವೆ. ಈ ಜಾಗರಣೆಯು ಶ್ರವಣ, ಕೀರ್ತನ, ಸ್ಮರಣ, ಪಾದಪೂಜೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ, ಆತ್ಮನಿವೇದನೆ ಎಂಬ ಒಂಬತ್ತು ಬಗೆಯ ಭಕ್ತಿಭಾವಗಳಿಂದ ಭಗವಂತನನ್ನು ಆರಾಧಿಸುವುದಕ್ಕೆ ವಿಧಿಸಲ್ಪಟ್ಟಿದೆ. ಜಾಗರಣೆಯ ಸಮಯದಲ್ಲಿ ದೈವಭಾವಕ್ಕೆ ಪೋಷಕವಾಗುವ ಕೆಲಸಗಳನ್ನು ಮಾಡದೆ, ಹೇಗಾದರೂ ಪುಣ್ಯ ಬರುತ್ತದೆಂಬ ಮೂಢನಂಬಿಕೆಯಿಂದ ಕೆಲವರು ಕ್ರೀಡಾಕೂಟ, ಕಲಹಕೂಟಗಳಲ್ಲಿ ಭಾಗವಹಿಸುತ್ತಾರೆ. ಇದು ಅಶಾಸ್ತ್ರೀಯ, ಅಧರ್ಮ. ಇದರಿಂದ ಇಷ್ಟಾರ್ಥದ ಪ್ರಾಪ್ತಿಯು ತಪ್ಪುವುದಲ್ಲದೆ, ಅನಿಷ್ಟದ ಪ್ರಾಪ್ತಿಯೂ ಉಂಟಾಗುತ್ತದೆ. ಪೂರ್ಣವಾಗಿ ಜಾಗರಣೆ ಮಾಡಲಾಗದವರು ಸಾಧ್ಯವಾದಷ್ಟು ಹೆಚ್ಚುಕಾಲ ಎಚ್ಚರವಾಗಿದ್ದು ಆಧ್ಯಾತ್ಯಕ್ಷೇತ್ರದಲ್ಲಿಯೂ ಎಚ್ಚರಿಕೆಯನ್ನು ಸಾಧಿಸಬೇಕು. ಕಾರಣಾಂತರದಿಂದ ಯಾರಿಗಾದರೂ ಜಾಗರಣೆ ದೇಹದ ಆರೋಗ್ಯಕ್ಕೂ, ದೇವರ ಧ್ಯಾನಕ್ಕೂ ತೊಂದರೆ ತರುವಂತಿದ್ದರೆ, ಅಂತಹವರು ನಿದ್ರಿಸುವುದು ಲೇಸು.

ಏಕಾದಶಿಯು ಅತ್ಯಂತ ಪವಿತ್ರವಾದ ಒಂದು ಮಹಾಪರ್ವ. ಅಂದು ಅಂತರಂಗ-ಬಹಿರಂಗಗಳಲ್ಲಿ ನಾರಾಯಣನ ಆರಾಧನೆಯನ್ನು ಮಾಡಬೇಕು. ಅದಕ್ಕೆ ಪೋಷಕವಾಗುವಂತೆ ಶಾಸ್ತ್ರಮರ್ಯಾದೆಯನ್ನನುಸರಿಸಿ ಆಹಾರಸೇವನೆಯನ್ನು ವರ್ಜಿಸುವುದು ಅಥವಾ ಪರಿಮಿತಿಗೊಳಿಸುವುದು ಮತ್ತು ಜಾಗರಣೆ ಮಾಡುವುದು ಧರ್ಮಸಮ್ಮತವೆಂದು ನಾವು ಭಾವಿಸುತ್ತೇವೆ. ಏಕಾದಶಿಯ ದಿನ ಇಂದ್ರಿಯಗಳಿಗೆ ಅವುಗಳ ವಿಷಯವನ್ನು ತಪ್ಪಿಸಿ ಉಪವಾಸ (ನಿರಾಹಾರ) ಮಾಡುವುದು ಒಳ್ಳೆಯದೇ. ಆದರೆ ಆ ಉಪವಾಸದಲ್ಲಿಯೇ ನಿಲ್ಲದೆ, ಭಗವಂತನ ಧ್ಯಾನವನ್ನು ಮಾಡಿ ಅವನ ಸಾಕ್ಷಾತ್ಕಾರವನ್ನು ಪಡೆದರೆ ಆಗ ವಿಷಯಾಭಿಲಾಷೆಯೆಂಬ ರಸವೂ ಬತ್ತಿಹೋಗುತ್ತದೆ. ಪರಮಾನಂದರಸಸ್ವರೂಪಿಯಾದ ಪರಮಾತ್ಮನಲ್ಲಿಯೇ ನೆಲೆ ಸಿಕ್ಕುತ್ತದೆ. ಅಂತಹ ಪರಮಪುರುಷಾರ್ಥದ ಪ್ರಾಪ್ತಿಗೋಸ್ಕರ ಅಂದು ನಿರಾಹಾರರೂಪದ ಉಪವಾಸ ಮಾಡಬೇಕು.

(ಆಕರ ಸೌಜನ್ಯ: ಶ್ರೀ ಶ್ರೀ ರಂಗಪ್ರಿಯ ಶ್ರೀಗಳ

‘ಭಾರತೀಯರ ಹಬ್ಬ-ಹರಿದಿನಗಳು’ ಕೃತಿ)