ಎಲ್ಲಿ ಮತ್ತೊಂದು ವಸ್ತು, ಮತ್ತೊಂದು ವ್ಯಕ್ತಿ, ಇನ್ನೊಂದು ವಿಚಾರವಿದೆಯೋ ಅದಕ್ಕೇ ಹೆಸರು ಸಂಸಾರ. ನಮ್ಮಲ್ಲಿ ಇಲ್ಲದಿರುವುದನ್ನು ಪಡೆಯಲು ನಾವು ಕರ್ಮವನ್ನು ಮಾಡಬೇಕು- ಅಪ್ರಾಪ್ತಸ್ಯ ಪ್ರಾಪ್ತಿಃ ಕರ್ಮಣಾ. ಇಲ್ಲದಿರುವುದನ್ನು ಪಡೆಯಲು ನಾವು ಕಷ್ಟಪಡಲೇ ಬೇಕು. ಯಾವುದು ಈಗಾಗಲೇ ನಮ್ಮಲ್ಲಿಯೇ ಇದೆಯೋ, ಯಾವುದು ನಮ್ಮ ಸ್ವಭಾವವೇ ಆಗಿದೆಯೋ ಅದನ್ನು ಕರ್ಮವನ್ನು ಮಾಡುವುದರಿಂದ ಪಡೆಯಲು ಸಾಧ್ಯವಿಲ್ಲ. ಪ್ರಾಪ್ತಸ್ಯ ಪ್ರಾಪ್ತಿ ಜ್ಞಾನೇನ. ನನ್ನ ಸ್ವಭಾವ, ನನ್ನ ಸ್ವರೂಪವನ್ನು ಅರಿಯಲು ನಾವು ಯಾವುದೇ ಕರ್ಮವನ್ನು ಮಾಡುವ ಅವಶ್ಯಕತೆ ಇಲ್ಲ.
ನಾವು ಏನೂ ಮಾಡದೇ ಇದ್ದರೆ ನಾವಿರುವ ಸ್ಥಿತಿಯೇ ಆತ್ಮ ಸ್ಥಿತಿ. ಆದರೆ ಇದು ಅತ್ಯಂತ ಕ್ಲಿಷ್ಟಕರವಾದಂತಹ ಸಾಧನೆ. ಯಾವಾಗಲೂ ಏನಾದರೂ ಕರ್ಮವನ್ನು ಮಾಡಿ ಜೀವನದಲ್ಲಿ ನಾವು ವಸ್ತು ವಿಷಯಗಳನ್ನು ಪಡೆಯುವುದು ನಮ್ಮ ಅಭ್ಯಾಸ. ಆದ್ದರಿಂದ ಅಧ್ಯಾತ್ಮ ತತ್ತ್ವವನ್ನೂ ಏನಾದರು ಮಾಡಿಯೇ ಪಡೆಯುತ್ತೇನೆ ಎಂಬ ಭಾವನೆಯಿಂದ ಹೊರಡುತ್ತೇವೆ. ಆದ್ದರಿಂದ ನಾವು ಆತ್ಮತತ್ತ್ವದಿಂದ ವಂಚಿತರಾಗುತ್ತೇವೆ. ಏನೂ ಮಾಡದೆಯೇ ತನ್ನಲ್ಲೇ ತಾನು ಸ್ಥಿರವಾಗಿರುವುದು ಅತ್ಯಂತ ಶ್ರೇಷ್ಠವಾದಂತಹ ಸಾಧನೆ.
ಆದರೆ ಅದು ನಮಗೆ ಸಾಧ್ಯವಾಗದೇ ಇರುವುದರಿಂದ ನಮಗೆ ಋಷಿಗಳು ಧ್ಯಾನವನ್ನು ಉಪದೇಶಿಸಿದರು ಧ್ಯಾನವು ಕೂಡ ನಮ್ಮಲ್ಲಿ ನಾವಿರಲು ಮಾಡುವ ಒಂದು ಸಾಧನೆ. ನಮಗೆ ಶಾಂತವಾಗಿರಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಏನಾದರೂ ಮಾಡಲು ಆತುರರಾಗಿದ್ದೇವೆ. ಪರಮಾತ್ಮನನ್ನು ಪಡೆಯಲು ನೀವು ಧ್ಯಾನ ಮಾಡಿ ಎಂದರು. ಅದಕ್ಕಾಗಿ ನಮ್ಮ ಮನಸ್ಸಿಗೆ ಏನೋ ಖುಷಿ. ಕಾರಣ ನಾವೇನಾದರೂ ಮಾಡಿದಲ್ಲಿ ಮಾತ್ರ ಪರಮಾತ್ಮನ ಪ್ರಾಪ್ತಿ ಎಂಬ ಭಾವನೆ ಮನಸಿಗೆ. ಆದರೆ ನಮ್ಮ ಪ್ರಯತ್ನವಾದ ಮೇಲೆ ಸಿಗುವ ಯಾವುದೇ ಫಲ ನಮಗಿಂತಲೂ ಶ್ರೇಷ್ಠವಾಗಿರಲು ಸಾಧ್ಯವಿಲ್ಲ. ಆದ್ದರಿಂದ ಸುಭಾಷಿತಕಾರ ಧ್ಯಾನವನ್ನು ಮಧ್ಯಮ ಎಂದು ಹೇಳುತ್ತಿದ್ದಾನೆ. ಏಕೆಂದರೆ ಸುಖ ಮತ್ತು ಸ್ಥಿರವಾದ ಆಸನದಲ್ಲಿ ನೇರವಾಗಿ ಕುಳಿತುಕೊಳ್ಳುವುದೂ ನಮಗೆ ಅತ್ಯಂತ ಕ್ಲಿಷ್ಟವಾದ ಸಾಧನೆಯಾಗಿದೆ.