ಬೆಂಗಳೂರು: ಸ್ಯಾಂಡಲ್ವುಡ್ ನಟಿ ಪ್ರಣಿತಾ ಸುಭಾಷ್ ಅವರು ಮತ್ತೆ ತಾಯಿ ಆಗುತ್ತಿದ್ದಾರೆ. ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಕಳೆದ ವರ್ಷವಷ್ಟೇ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈ ಮೂಲಕ ಮತ್ತೊಮ್ಮೆ ತಾವು ಪ್ರೆಗ್ನೆಂಟ್ ಎಂಬ ಸುದ್ದಿಯನ್ನು ಪ್ರಣಿತಾ ಸುಭಾಷ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೌಂಡ್ 2... ಪ್ಯಾಂಟ್‌ಗಳು ಇನ್ಮುಂದೆ ಹೊಂದಿಕೆಯಾಗುವುದಿಲ್ಲ ಎಂದು ಪೋಸ್ಟ್ ಮಾಡುವ ಮೂಲಕ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು, ಪೊರ್ಕಿ ಸಿನಿಮಾ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಅನಂತರ ಮತ್ತಷ್ಟು ಕನ್ನಡ ಸಿನಿಮಾದಲ್ಲಿ ನಟಿಸಿದರು. ಅನೇಕ ಸ್ಟಾರ್ ಹೀರೋಗಳ ಜೊತೆಗೆ ಅವರು ತೆರೆ ಹಂಚಿಕೊಂಡಿದ್ದಾರೆ. ಪ್ರಣಿತಾ ಫೌಂಡೇಶನ್ ಮೂಲಕ ಹಲವು ಸಾಮಾಜಿಕ ಕಾರ್ಯಗಳಲ್ಲಿ ಕಾಣಿಸಿಕೊಂಡಿದ್ದರು. ದರ್ಶನ್ ಜೊತೆಗೆ ಕನ್ನಡದ ಪೊರ್ಕಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಈ ಬೆಡಗಿ, ತದನಂತರ ಹಲವು ಸಿನಿಮಾಗಳಲ್ಲಿ ನಟಿಸಿದರು. ತೆಲುಗು, ತಮಿಳು ಸಿನಿಮಾಗಳಲ್ಲಿ ಮಾತ್ರ ನಟಿಸದೆ, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
2021ರ ಮೇ ತಿಂಗಳಲ್ಲಿ ಉದ್ಯಮಿ ನಿತಿನ್ ರಾಜು ಜತೆ ಪ್ರಣಿತಾ ಹಸೆಮಣೆ ಏರಿದರು. ಕೋವಿಡ್ ಮುಂಜಾಗ್ರತೆ ಕ್ರಮವಾಗಿ ಕೇವಲ ಆಪ್ತರ ಸಮ್ಮುಖದಲ್ಲಿ ಅವರ ಮದುವೆ ಸಮಾರಂಭ ನಡೆದಿತ್ತು. ಕಳೆದ ವರ್ಷ ಜೂನ್ 10 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಣಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಪ್ರಣಿತಾ ತಮ್ಮ ಮಗಳಿಗೆ ಅರ್ನಾ ಎಂದು ಹೆಸರಿಟ್ಟಿದ್ದಾರೆ. ಅರ್ನಾ ಎಂದರೆ ಬೆಟ್ಟದಂತ ಶಕ್ತಿ ಎಂದರ್ಥ.