ಬೆಂಗಳೂರು: ಕನ್ನಡದ ‘ರತ್ನನ್ ಪ್ರಪಂಚ’, ‘ಬಾಂಡ್ ರವಿ’, ತೆಲುಗಿನ ‘ಸಲಾರ್: 1 ಸೀಸ್‌ೈರ್’ ನಂತಹ ಚಿತ್ರಗಳಲ್ಲಿ ರಗಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ಪ್ರಮೋದ್ ಇದೀಗ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ. ಅರ್ಥಾತ್, ಅವರ ಮುಂದಿನ ‘ಭುವನಂ ಗಗನಂ’ ಸಿನಿಮಾದಲ್ಲಿ ಲವರ್‌ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗಿರೀಶ್ ಮೂಲಿಮನಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಮೋದ್, ಪೃಥ್ವಿ ಅಂಬಾರ್, ರೇಚೆಲ್ ಡೇವಿಡ್, ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಎರಡು ಸಾಂಗ್‌ಗಳು ಭರವಸೆ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ನಟ ಪ್ರಮೋದ್ ಸಿನಿಮಾ ಹಾಗೂ ಪಾತ್ರದ ಬಗ್ಗೆ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡರು. ‘‘ರತ್ನನ್ ಪ್ರಪಂಚ’ಬಳಿಕ ನಾನು ಲವ್‌ಸ್ಟೋರಿಗೆ ಎದುರು ನೋಡುತ್ತಿದ್ದೆ. ಆ ಸಮಯದಲ್ಲಿ ಈ ಕಥೆ ಕೇಳಿದೆ. ನನಗೆ ಇದೇ ಬೇಕಾಗಿರುವುದು ಎಂದು ಈ ಕಥೆ ಒಪ್ಪಿಕೊಂಡೆ. ಕುಟುಂಬ, ಸ್ನೇಹ, ಪ್ರೀತಿಯ ಪಯಣ ಎಲ್ಲವೂ ಇದ್ದು, ಕೊನೆಗೆ ಸಿಗುವ ಟ್ವಿಸ್ಟ್ ಮೂಲಕವೇ ಇಡೀ ಕಥೆಯನ್ನು ಪ್ರೇಕ್ಷಕರು ಮನೆಗೆ ಕೊಂಡೊಯ್ಯುತ್ತಾರೆ’ ಎಂದು ಮಾಹಿತಿ ನೀಡುತ್ತಾರೆ.
ಲುಕ್ ಬದಲಾಯಿಸಿದೆ: ಪ್ರತಿ ಸಿನಿಮಾಗಳಲ್ಲಿ ಪಾತ್ರಕ್ಕಾಗಿ ಸಿದ್ಧತೆ ನಡೆಸುವ ಪ್ರಮೋದ್ ಈ ಚಿತ್ರದಲ್ಲಿ ಲವರ್‌ಬಾಯ್ ಕಾಣಿಸಿಕೊಳ್ಳುವುದಕ್ಕಾಗಿ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ‘ಈ ಹಿಂದಿನ ಸಿನಿಮಾಗಳಲ್ಲಿ ರಗಡ್ ಲುಕ್ ಇತ್ತು. ಇಲ್ಲಿ ಸ್ವಲ್ಪ ಚೇಂಜ್ ಆಗಿದೆ. ಲವರ್ ಬಾಯ್ ಇಮೇಜ್‌ಗಾಗಿ ನಾನು ಹೇರ್‌ಸ್ಟೈಲ್, ನನ್ನ ಹಾವ-ಭಾವ ಬದಲಾಯಿಸಿಕೊಂಡು ಮೃದುವಾಗಿದ್ದೇನೆ. ಕೆಲವರು ಟೀಸರ್, ಸಾಂಗ್‌ನಲ್ಲಿ ನನ್ನನ್ನು ನೋಡಿ, ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಪ್ರಮೋದ್ ಮಾಹಿತಿ ನೀಡುತ್ತಾರೆ.
ಪೃಥ್ವಿದು ಗಟ್ಟಿ ಪಾತ್ರ: ಈ ಚಿತ್ರದಲ್ಲಿ ಪ್ರಮೋದ್ ಹಾಗೂ ಪೃಥ್ವಿ ಅಂಬಾರ್ ಜಂಟಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಇಬ್ಬರ ಪಾತ್ರಗಳ ಸಾಗುವಿಕೆ ಬಗ್ಗೆ ‘ಮೊದಲಿಗೆ ಎರಡು ಪಾತ್ರಗಳ ಜರ್ನಿ ಆರಂಭವಾಗುತ್ತದೆ. ಆದರೆ, ಕೊನೆಗೆ ಯಾವುದು ಮುಖ್ಯ, ಯಾವುದು ಅಮುಖ್ಯ ಎಂಬುದನ್ನು ಈ ಎರಡು ಪಾತ್ರಗಳು ಪ್ರತಿನಿಧಿಸುತ್ತವೆ. ಪೃಥ್ವಿ ಅಂಬಾರ್ ಪಾತ್ರ ಗಟ್ಟಿಯಾಗಿದ್ದು, ಅದರಲ್ಲಿ ಜೀವಿಸಿದ್ದಾರೆ. ನಮ್ಮಿಬ್ಬರ ಕೆಮಿಸ್ಟ್ರಿ ಈ ಸಿನಿಮಾದಲ್ಲಿ ವರ್ಕೌಟ್ ಆಗಿದೆ’ ಎನ್ನುತ್ತಾರೆ.
ರಮೇಶ್ ಇಂದಿರಾ ಸಿನಿಮಾದಲ್ಲಿ: ನಟ ಪ್ರಮೋದ್ ಮುಂದಿನ ವರ್ಷ ತುಂಬಾ ಬಿಜಿಯಾಗಲಿದ್ದಾರೆ. ಈ ಬಗ್ಗೆ ‘ಶ್ರುತಿ ನಾಯ್ಡು ನಿರ್ಮಾಣದ, ರಮೇಶ್ ಇಂದಿರಾ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ಈಗಾಗಲೇ ಎರಡು-ಮೂರು ದಿನ ಶೂಟಿಂಗ್ ನಡೆಸಲಾಗಿದೆ. ಜತೆಗೆ ಇನ್ನೊಂದು ಬಿಗ್ ಪ್ರೊಡಕ್ಷನ್ ಹೌಸ್‌ನಿಂದ ಕರೆ ಬಂದಿದೆ. ಅಲ್ಲದೇ ‘ಸಲಾರ್-2’ ಮುಂದುವರಿಯಲಿದೆ. ಇನ್ನು ಕಥೆಯಲ್ಲಿ ನಾನು ಜೀವಿಸುವಂತಿದ್ದರೆ, ಅಂತಹ ಕಥೆಗಳನ್ನು ಕಣ್ಮುಚ್ಚಿ ಒಪ್ಪಿಕೊಳ್ಳುವೆ’ ಎನ್ನುವ ಪ್ರಮೋದ್, ಅಣ್ಣಾವ್ರ ‘ಮಯೂರ’ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತಪಡಿಸುತ್ತಾರೆ.