ನ್ಯೂಸ್

C.T. Ravi ಬಂಧನ ಪ್ರಕರಣ; ಪ್ರಲ್ಹಾದ್ ಜೋಶಿ ಬಾಂಬ್​: ಪೊಲೀಸರಿಗೆ ಫೇಕ್ ಎನ್ ಕೌಂಟರ್ ಮಾಡುವ ಪ್ಲಾನ್ ಇತ್ತಂತೆ?

ಬಾಗಲಕೋಟೆ: ಮಾಧ್ಯಮದವರು ಇಲ್ಲದಿದ್ದರೆ ಸಿ.ಟಿ.ರವಿ(C.T.Ravi) ಅವರನ್ನ ಫೇಕ್ ಎನ್ ಕೌಂಟರ್ ಮಾಡುವ ಪ್ಲಾನ್ ಪೊಲೀಸರಿಗೆ ಇದ್ದಂತೆ ನನಗೆ ಅನ್ನಿಸುತ್ತೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅನುಮಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ರಾತ್ರಿ ಸುದ್ದಿಗಾರರ ಜೊತೆ ಮಾತನಾಡಿದ ಕೇಂದ್ರ ಸಚಿವ, ಬಹುಷಃ ಪೊಲೀಸರಿಗೆ ಅವಕಾಶ ಸಿಕ್ಕಿದ್ದರೆ ರವಿನ ಮುಗಿಸಬೇಕು ಎನ್ನುವ ಯೋಚನೆ ಇತ್ತು ಅನ್ನಿಸುತ್ತೆ. ಆದರೆ, ಮಾಧ್ಯಮದವರು ಅವರ ಬೆನ್ನು ಹತ್ತಿ ಲೋಕೇಶನ್ ಕಳಿಸುತ್ತಿದ್ದ ಪರಿಣಾಮ ಹಾಗೂ ಮತ್ತೊಬ್ಬ ಎಂಎಲ್ಸಿ ಕೇಶವ್ ಪ್ರಸಾದ್ ಅವರ ಹಿಂದೆ ಇದ್ದಿದ್ದರಿಂದ ಆ ಅವಕಾಶ ಪೊಲೀಸರಿಗೆ ಸಿಕ್ಕಿಲ್ಲ. ಇದಕ್ಕಾಗಿ ನಾನು ಬೆಳಗಾವಿ ಮಾಧ್ಯಮದವರಿಗೆ ಧನ್ಯವಾದ ಹೇಳಬೇಕು ಎಂದು ಹೇಳಿದ್ದಾರೆ.

ಇಡೀ ಪ್ರಕರಣ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದರಿಂದ ಇದಕ್ಕೆ ಗೃಹಮಂತ್ರಿಗಳು ಜವಾಬ್ದಾರರು. ಒಬ್ಬ ಮಾಜಿ ಮಂತ್ರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದ ವ್ಯಕ್ತಿಯನ್ನ ನಿರ್ಜನ ಪ್ರದೇಶದಲ್ಲಿ, ಕಾಡಿನಲ್ಲಿ, ಕಬ್ಬಿನ ಗದ್ದೆಯಲ್ಲಿ ಹೋಗಿ ನಿಲ್ಲಿಸೋದು ಎಂದ್ರೆ ಏನು? ಪೊಲೀಸ್ ಕಮಿಷನರ್ ಹಾಗೂ ಅವರ ತಂಡ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಪರ ಈ ರೀತಿ ಗುಲಾಮಗಿರಿ ಮಾಡೋದಾ ಎಂದು ಖಾರವಾಗಿ ಪ್ರಶ್ನಿಸಿದರು.

ಸರ್ಕಾರದ ಅಧಿಕಾರಿಗಳಿಗೆ ತಾವು ಜನರ ತೆರಿಗೆ ಹಣದಿಂದ ಸಂಬಳ ಪಡೆಯುತ್ತಿದ್ದೇವೆ ಎನ್ನುವ ಅರಿವು ಕಮಿಷನರ್​ಗೆ ಇರಬೇಕಲ್ವಾ? ಯಾರು ಕಾನೂನು ಕೈಗೆ ತೆಗೆದುಕೊಂಡಿದ್ದಾರೆ ಅವರ ವಿರುದ್ಧ ನಾವು ಕೋರ್ಟ್​ಗೆ ಹೋಗುತ್ತೇವೆ. ಆದರೆ, ಈ ಕಮಿಷನರ್​ಗೆ ಎಷ್ಟು ದುಷ್ಟಬುದ್ದಿ ಇದೆ ಎಂದರೆ ಸಿ.ಟಿ.ರವಿ ಅವರನ್ನ ತಮ್ಮ ವ್ಯಾಪ್ತಿ ಬಿಟ್ಟು ಗದಗ, ಬಾಗಲಕೋಟೆ, ಧಾರವಾಡ ವ್ಯಾಪ್ತಿಯಲ್ಲಿ ಓಡಾಡಿಸಿದ್ದಾರೆ ಎಂದು ಕಿಡಿಕಾರಿದರು.

ಪೊಲೀರಸರು ಒಂದನ್ನ ತಲೆಯಲ್ಲಿ ಇಟ್ಟುಕೊಳ್ಳಬೇಕು. ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದರೆ ನೆನಪಿಟ್ಟುಕೊಳ್ಳಿ ಸರ್ಕಾರಗಳು ಬದಲಾಗುತ್ತವೆ ಎಂದು ಎಚ್ಚರಿಕೆ ಕೊಟ್ಟರು.

ಸಿ.ಟಿ.ರವಿ ಅವಹೇಳನಕಾರಿ ಶಬ್ದ ಬಳಸಿದ ಮಾತ್ರಕ್ಕೆ ಎನ್ ಕೌಂಟರ್ ಮಾಡುವ ಹಂತಕ್ಕೆ ಹೋಗುತ್ತಾರೆ ಎಂದರೆ.? ಒಂದೇ ಕಾರಣ ಎಂದು ನಾನು ಹೇಳುವುದಿಲ್ಲ. ಈ ರೀತಿ ಒಬ್ಬರನ್ನ ಮುಗಿಸಿಬಿಟ್ಟರೆ ಬಿಜೆಪಿ ಯಾವುದೇ ಆ್ಯಕ್ಟಿವಿಟಿ ಮಾಡಲ್ಲ. ಹೆದರಿಕೊಳ್ಳುತ್ತಾರೆ ಎಂದು ಭಯ ಸೃಷ್ಟಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು.

ವಿಧಾನಸೌಧಕ್ಕೆ ಬರಲು ಪೊಲೀಸರಿಗೆ ಹೇಗೆ ಅನುಮತಿ ನೀಡಿದರು? ದೂರಿಗೆ ಸಹಿ ಇಲ್ಲ, ಸಭಾಪತಿಗಳು ಪರವಾನಿಗೆ ಕೊಟ್ಟಿಲ್ಲ, ಯಾರು ಅನಧಿಕೃತವಾಗಿ ಪ್ರವೇಶ ಮಾಡಿದರು. ಅಲ್ಲಿನ ಗೇಟ್ ಒದ್ದರು, ರವಿ ಮೇಲೆ ಹಲ್ಲೆ ಮಾಡಿದರು, ಆಕಸ್ಮಾತ್ ಮಾರ್ಷಲ್​ಗಳು ಇರದೇ ಇದ್ದರೆ ?

ರವಿಗೆ ಧಮ್ಕಿ ಹಾಕಿ ನಿಮ್ಮ ಹೆಣ ಹೋಗುತ್ತದೆ ಎಂದವರನ್ನ, ಗೇಟ್ ಮುರಿದವರಲ್ಲಿ ಒಬ್ಬರನ್ನು ಪೊಲೀಸರು ಬಂಧಿಸಿಲ್ಲ. ಈ ಕಮಿಶನರ್ ನ ಕಾಂಗ್ರೆಸ್ ನಿಷ್ಠೆ ಎಷ್ಟಿದೆ ನೋಡಿ ಎಂದರು.