ನ್ಯೂಸ್

ದಯವಿಟ್ಟು ಯಾರಾದರೂ ಡಿಸಿಎಂ ಪವನ್​ ಕಲ್ಯಾಣ್​ಗೆ ವಿವರಿಸಿ; ನಟ ಪ್ರಕಾಶ್​ ರಾಜ್​​​ ಹೇಳಿದ್ದೇನು? | Prakash Raj

ಅಮರಾವತಿ: ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿಯನ್ನು ಸಿಎಂ ಸ್ಟಾಲಿನ್ ಮುನ್ನಡೆಸುತ್ತಿರುವುದು ಗೊತ್ತೆ ಇದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ತ್ರಿಭಾಷಾ ಸೂತ್ರವನ್ನು ವಿರೋಧಿಸುತ್ತಿರುವ ಅವರು ಇದು ಹಿಂದಿ ಹೇರಿಕೆ ಎಂದು ಆರೋಪಿಸಿದ್ದಾರೆ. ಈ ಕುರಿತು ಆಂಧ್ರಪ್ರದೇಶದ ಡಿಸಿಎಂ ಪವನ್​ ಕಲ್ಯಾಣ್​ ಕೊಟ್ಟ ಹೇಳಿಕೆ ವಿರುದ್ಧ ಪ್ರಕಾಶ್​ ರಾಜ್​​ ವಾಗ್ದಾಳಿ ನಡೆಸಿದ್ದಾರೆ.

ಪಿಠಾಪುರಂನ ಚಿತ್ರಾಡದಲ್ಲಿ ನಡೆದ ಜನಸೇನಾ ಪಕ್ಷದ ಸಭೆಯಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್​​ ಈ ವಿಷಯವನ್ನು ಪ್ರಸ್ತಾಪಿಸಿದರು. ಕೆಲವರು ಪ್ರಸ್ತುತ ಭಾಷೆ ಮತ್ತು ಸಂಸ್ಕೃತಿಯನ್ನು ಅವಮಾನಿಸುತ್ತಿದ್ದಾರೆ ಮತ್ತು ಹಿಂದಿಯನ್ನು ದಮನಿಸಲಾಗುತ್ತಿದೆ ಎಂದು ಪರೋಕ್ಷವಾಗಿ ಟೀಕಿಸಿದರು.

ಸದ್ಯ ಪವನ್ ಕಲ್ಯಾಣ್ ಅವರ ಹೇಳಿಕೆಗೆ ಚಲನಚಿತ್ರ ನಟ ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ. ದಯವಿಟ್ಟು ಪವನ್ ಕಲ್ಯಾಣ್ ಅವರಿಗೆ ಯಾರಾದರೂ ಇದನ್ನು ವಿವರಿಸಿ. ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಬಲವಂತವಾಗಿ ಹೇರಬೇಡಿ ಎಂದು ಹೇಳುವುದು ಬೇರೆ ಭಾಷೆಯನ್ನು ದ್ವೇಷಿಸುತ್ತೇವೆ ಎಂದರ್ಥವಲ್ಲ. ಅದು ನಮ್ಮ ಮಾತೃಭಾಷೆ ಮತ್ತು ನಮ್ಮ ಸಾಂಸ್ಕೃತಿಕ ಗುರುತನ್ನು ಸ್ವಾಭಿಮಾನದಿಂದ ರಕ್ಷಿಸುವುದು ಎಂದರ್ಥ ಎಂದು ಪ್ರಕಾಶ್​ ರಾಜ್​ ಮಾಡಿರುವ ಪೋಸ್ಟ್​​ನಲ್ಲಿ ತಿಳಿಸಿದ್ದಾರೆ.

ಅಂದ್ಹಾಗೆ ಪ್ರಕಾಶ್​ ರಾಜ್​​ ಈ ಹಿಂದೆ ಹಲವು ಸಂದರ್ಭಗಳಲ್ಲಿ ಪವನ್​ ಕಲ್ಯಾಣ್​ ಅವರನ್ನು ಟೀಕಿಸಿದ್ದಾರೆ. ತಿರುಮಲ ಲಡ್ಡು ಸಂಬಂಧ ಮತ್ತು ಸನಾತನ ಧರ್ಮದ ಕುರಿತು ಪವನ್ ಕಲ್ಯಾಣ್​​​ ಅವರ ಟೀಕೆಗಳಿಗೆ ಪ್ರಕಾಶ್​ ರಾಜ್​ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯುತ್ತರ ನೀಡಿದ್ದಾರೆ.(ಏಜೆನ್ಸೀಸ್​​)