ಬೆಂಗಳೂರು: ಬ್ಯಾಂಕಿಂಗ್ ವಲಯದ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕಿಂಗ್ ನೌಕರರ ನೇಮಕಾತಿ ಸಂಸ್ಥೆ (ಐಬಿಪಿಎಸ್) ಪರೀಕ್ಷೆ ನಡೆಸಲಿದ್ದು, ಈ ಸಲವೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕನ್ನಡಿಗ ಪರೀಕ್ಷಾರ್ಥಿಗಳು ಮತ್ತು ಕನ್ನಡಪರ ಸಂಘಟನೆಗಳಿಂದ ಇದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಇತ್ತೀಚೆಗಷ್ಟೇ ಈ ಕುರಿತು ಸಂಸ್ಥೆಯು ಅಧಿಸೂಚನೆ ಹೊರಡಿಸಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಗಿದೆ. ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂಬುದು ಕನ್ನಡಿಗರ ಬಹು ವರ್ಷಗಳ ಬೇಡಿಕೆಯಾಗಿದೆ. ಕೆಲವು ತಿಂಗಳುಗಳ ಹಿಂದೆ ಈ ವಿಷಯ ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿತ್ತು. ಆಗ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕನ್ನಡದಲ್ಲಿಯೂ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಿಕೊಡುವುದಾಗಿ ಸ್ಪಷ್ಟ ಭರವಸೆ ನೀಡಿದ್ದರು. ಆದರೆ ಮೊನ್ನೆಯಷ್ಟೇ ಹೊರಡಿಸಿರುವ 2020ರ ಪರೀಕ್ಷೆಯ ಅಧಿಸೂಚನೆಯಲ್ಲಿ ಕನ್ನಡ ಭಾಷೆಯ ಸುಳಿವೇ ಇಲ್ಲದಿರುವುದು ಕನ್ನಡಿಗ ಪರೀಕ್ಷಾರ್ಥಿಗಳನ್ನು ಮತ್ತು ಕನ್ನಡಪರ ಹೋರಾಟಗಾರರನ್ನು ಕೆರಳಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಪುತ್ರನಿಗೂ ಕರೊನಾ ಸೋಂಕು ದೃಢ
ಇದೇ ವಿಷಯವನ್ನು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಟ್ವಿಟರ್‌ನಲ್ಲಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಕೇಂದ್ರದ ಈ ನಿರ್ಧಾರದಿಂದ ಸಾವಿರಾರು ಕನ್ನಡಿಗ ಪರೀಕ್ಷಾರ್ಥಿಗಳು ಬ್ಯಾಂಕಿಂಗ್ ಹುದ್ದೆಗಳಿಂದ ವಂಚಿತರಾಗಲಿದ್ದಾರೆ. ಕೂಡಲೇ ಸರ್ಕಾರ ಈ ಅನ್ಯಾಯವನ್ನು ಸರಿಪಡಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರ ಎಚ್ಚರಿಕೆ ನೀಡಿದ್ದಾರೆ. ವಿವಿಧ ಬ್ಯಾಂಕುಗಳ 1417 ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ಐಬಿಪಿಎಸ್ ಅಧಿಸೂಚನೆ ಹೊರಡಿಸಿದೆ.