ನ್ಯೂಸ್

ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ ಮತ್ತೆ 4 ದಿನ ಪೊಲೀಸ್ ಕಸ್ಟಡಿಗೆ!

ಬೆಂಗಳೂರು: ಅತ್ಯಾಚಾರ ಆರೋಪದಡಿ ಎಸ್​ಐಟಿ ಕಸ್ಟಡಿಯಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೂನ್ 10ರವರೆಗೆ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಪ್ರಜ್ವಲ್‌ ರೇವಣ್ಣ ಅವರ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಆರೋಪಿಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಮುಂದೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಇನ್ನಷ್ಟು ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.

ಎಸ್‍ಐಟಿ ಪರ ವಕೀಲರು ತನಿಖೆಗೆ ಸಮಯ ಸಾಕಾಗಿಲ್ಲ. ಮೊಬೈಲ್ ವಿಚಾರವಾಗಿ ಮಾಹಿತಿ ಇನ್ನೂ ಕೂಡ ಸಿಕ್ಕಿಲ್ಲ. ಮುಖ್ಯವಾಗಿ ಸಮಯಾವಾಕಾಶ ಕಡಿಮೆ ಇದೆ. ವಿದೇಶದಲ್ಲಿ ಇದ್ದಾಗ ಹಣ ಹೇಗೆ ಸಂದಾಯ ಆಗಿದೆ ಗೊತ್ತಾಗಿಲ್ಲ. ಇವರು ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದು, ಇವರಿಗೆ ಹಣ ನೀಡಿದವರು ಯಾರು ಗೊತ್ತಾಗಬೇಕು. ಕೆಲವು ಸಂತ್ರಸ್ತೆಯರು, ಸಾಕ್ಷಿಗಳನ್ನು ಮುಖಾಮುಖಿ ಮಾಡಬೇಕಾಗಿದೆ. ಏನು ಕೇಳಿದ್ರೂ ಸರಿಯಾದ ಉತ್ತರವನ್ನು ನೀಡಿಲ್ಲ. ನಾನು ಏನು ಮಾಡಿಲ್ಲ ಅಂತ ಪ್ರಜ್ವಲ್ ಹೇಳುತ್ತಾ ಇದ್ದಾರೆ. ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋಗಿದ್ದರು ಹೀಗಾಗಿ ಜೂನ್ 10 ರ ತನಕ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್​ ಪರ ವಕೀಲರ ಅಶೋಕ್​ ನಾಯಕ್​ ಅವರು ಆರೋಪಿಯ ಕಸ್ಟಡಿ ವಿಸ್ತರಿಸುವಂತೆ ಮಾಡಿದ ಮನವಿಯನ್ನು ಎಸಿಎಂಎಂ 42ನೇ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್​. ಶಿವಕುಮಾರ್​ ಮನ್ನಿಸಿ ಈ ಕುರಿತಂತೆ ಆದೇಶಿಸಿದರು.

ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಶುರು ಮಾಡಿದ್ದು, ಪ್ರಜ್ವಲ್ ವಿದೇಶಕ್ಕೆ ತೆರಳಿರುವುದು, ಹಣ ಹೇಗೆ ಸಂದಾಯವಾಯಿತು ಎಂಬುದು ತನಿಖೆಯ ವ್ಯಾಪ್ತಿಯಲ್ಲ. ಇದಕ್ಕೆ ಕಸ್ಟಡಿ ಪಡೆದು ತನಿಖೆಗೆ ಒಳಪಡಿಸುವ ಅಗತ್ಯವಿಲ್ಲ ಎಂದರು.

ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆ ಹಾಗೂ ಸಿಐಡಿ ಠಾಣೆಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣಗಳ ತನಿಖೆಗೆ ಎಸ್​ಐಟಿ ರಚನೆ ಮಾಡಿ ಆದೇಶ ಮಾಡಿತ್ತು.