ಬೆಂಗಳೂರು: ರಾಕ್ಷಸೀ ಕೃತ್ಯ ಎಸಗಿರುವ ಪ್ರಜ್ವಲ್ ರೇವಣ್ಣ ಮೋದಿ ಪರಿವಾರದ ವ್ಯಕ್ತಿ. ಈತ ಎಸಗಿರುವ ಕೃತ್ಯ ನೋಡಿದರೆ ಆಘಾತವಾಗುತ್ತದೆ. ತಾನು ಸಾವಿರಾರು ಮಹಿಳೆಯರ ಮೇಲೆ ಎಸಗಿರುವ ಕೃತ್ಯವನ್ನು ತಾನೇ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಇದು ಲೈಂಗಿಕ ಹಗರಣವಲ್ಲ ದೇಶದ ದೊಡ್ಡ ಅತ್ಯಾಚಾರ ಪ್ರಕರಣ ಎಂದು ಎಐಸಿಸಿ ಮಾಧ್ಯಮ, ಸಂವಹನ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರೀನಾಟೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಲೋಕಸಭಾ ಚುನಾವಣೆಯ 15 ದಿನ ಮೊದಲು ಪ್ರಜ್ವಲ್ ರೇವಣ್ಣ ಪರವಾಗಿ ಮತ ಕೇಳುತ್ತಾರೆ. ಒಂದೇ ವೇದಿಕೆ ಹಂಚಿಕೊಂಡು ನಿಂತಿದ್ದಾರೆ. ಮೋದಿ ಅವರು ಇದೇ ಮೊದಲ ಬಾರಿಗೆ ಆರೋಪಿಯನ್ನು ಭೇಟಿ ಮಾಡುವುದಿಲ್ಲ, ಮೈತ್ರಿ ಮಾತುಕತೆ ವೇಳೆ ದೆಹಲಿಯಲ್ಲಿ ಕೂಡ ಭೇಟಿ ಮಾಡಿದ್ದಾರೆ ಎಂದರು.
ಈಗಾಗಲೇ ಎಸ್ ಐಟಿ ಆರೋಪಿಯ ತಂದೆ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ. ಆದರೆ ಈತ ಯಾರಿಗೂ ತಿಳಿಯದಂತೆ ದೇಶ ಬಿಟ್ಟು ಹೋಗಿದ್ದು ಹೇಗೆ? ಎಸ್ ಐಟಿ ರಚನೆ ಆಗುತ್ತದೆ ಎಂದು ತಿಳಿದು ಕೆಲವೇ ಗಂಟೆಗಳಲ್ಲಿ ತಪ್ಪಿಸಿಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿಯವರಿಗೆ ಈಗ ಮಾಡಿದ ಎಲ್ಲಾ ದುಷ್ಕೃತ್ಯಗಳ ಬಗ್ಗೆ ಮೊದಲೇ ಗೊತ್ತಿತ್ತು. ಈತ ಎಂತವನು ಎಂಬುದು ಮೋದಿಯವರಿಗೆ ಗೊತ್ತಿತ್ತು. ಏಕೆಂದರೆ ಬಿಜೆಪಿ ನಾಯಕ ದೇವರಾಜೇಗೌಡ 2023 ಡಿಸೆಂಬರ್ ತಿಂಗಳಲ್ಲೇ ಮೋದಿ, ಜೆ.ಪಿ.ನಡ್ಡಾ ಮತ್ತು ಅಮಿತ್ ಶಾ ಇಬ್ಬರಿಗೂ ಪತ್ರ ಬರೆದಿದ್ದರು, ಈ- ಮೇಲ್ ಮಾಡಿದ್ದರು. 2024 ಜನವರಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ ಮೈತ್ರಿ ಬೇಡ ಎಂದು ಎಲ್ಲಾ ಸಾಕ್ಷಿಗಳನ್ನು ನೀಡಿದ್ದರು ಎಂದರು.
ಈ ದೇಶದಲ್ಲಿ ಯಾವುದೇ ಮಹಿಳೆಯ ಮೇಲೆ ಶೋಷಣೆ ನಡೆದರೂ ಪ್ರಧಾನಿ ಮೋದಿ ಅವರು ಕಣ್ಣು ಮುಚ್ಚಿಕೊಂಡು ಕುಳಿತಿರುತ್ತಾರೆ. ಹಾಗೂ 500 ಮೀ ದೂರ ನಿಲ್ಲುತ್ತಾರೆ. ಮಹಿಳೆಯರು ಅತ್ತು ಕರೆದರೂ ಅವರಿಗೆ ಕೇಳಿಸುವುದಿಲ್ಲ ಎಂದು ಟೀಕಿಸಿದರು.