ನ್ಯೂಸ್

ಪ್ರಜ್ವಲ್​ಗೆ ಜೀವಿತಾವಧಿ ಜೈಲು; ಖೈದಿ ನಂ. 15528, ಮಾಸಿಕ 524 ರೂ.! ಪ್ರತಿನಿತ್ಯ ಏನೆಲ್ಲ ಕೆಲಸ ಮಾಡ್ಬೇಕು ಗೊತ್ತಾ? | Prajwal Revanna

Prajwal Revanna: ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಇದೀಗ ಕೋರ್ಟ್ ಜೀವನಪರ್ಯಂತ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಜೀವಿತಾವಧಿ ಜೈಲು ಜೊತೆಗೆ ಐದು ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ, ಸಂತ್ರಸ್ತೆಗೆ 11 ಲಕ್ಷ ರೂ. ಪರಿಹಾರವನ್ನು ಕೊಡುವಂತೆ ಆದೇಶಿಸಿದೆ.

ಕೆಲಸ ಮಾಡಬೇಕು!

ಅಪರಾಧಿ ಪ್ರಜ್ವಲ್​ಗೆ ಇಂದಿನಿಂದ ಸೆರೆಮನೆ ವಾಸ ಶುರುವಾಗಿದ್ದು, ಜೈಲಿನಲ್ಲಿರುವ ಇತರೆ ಖೈದಿಗಳಂತೆಯೇ ಜೀವಿಸಲು ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ಯಾವುದೇ ವಿಶೇಷ ಸೌಲಭ್ಯವಾಗಲಿ ಅಥವಾ ಸೌಕರ್ಯಗಳಾಗಲಿ ಕೊಡದಿರಲು ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ನಿನ್ನೆಯ (ಆ.02) ಕೋರ್ಟ್​ ತೀರ್ಪಿನ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಪ್ರಜ್ವಲ್​ನನ್ನು ಶಿಫ್ಟ್​ ಮಾಡಲಾಗಿದೆ. ಜೈಲಿನಲ್ಲಿ ಧರಿಸಬೇಕಾದ ಬಿಳಿ ಅಂಗಿಯನ್ನು ಮತ್ತು ಅದಕ್ಕೆ ನೀಡಲಾದ ಖೈದಿ ನಂಬರ್ ಅನ್ನೂ ಈಗಾಲೇ ಹಸ್ತಾಂತರಿಸಲಾಗಿದೆ.

ಖೈದಿ ನಂಬರ್​, ಮಾಸಿಕ ಸಂಬಳ ನಿಗದಿ

ಜೈಲು ಕಂಬಿಗಳ ಹಿಂದಿರುವ ಪ್ರಜ್ವಲ್ ರೇವಣ್ಣ ಖೈದಿ ಸಂಖ್ಯೆ 15528. ಪ್ರತಿನಿತ್ಯ ಕೆಲಸ ಮಾಡಲೇಬೇಕು. ಇದಕ್ಕೆ ಮಾಸಿಕ ಕೂಲಿಯನ್ನು ಸಹ ನೀಡಲಾಗುವುದು. ಜೈಲಿನಲ್ಲಿ ತೋಟಗಾರಿಕೆ, ಡೈರಿ, ತರಕಾರಿ ಬೆಳೆಯುವುದು, ಕೃಷಿ, ಮರಗೆಲಸ ಅಥವಾ ಕರಕುಶಲ ಕೆಲಸ ಸೇರಿದಂತೆ ಹಲವಾರು ನಿಯೋಜಿಸಲಾದ ಕೆಲಸಗಳನ್ನು ಮಾಡಬೇಕಿದೆ. ಸದ್ಯದ ಮಟ್ಟಿಗೆ ಆತನನ್ನು ಕೌಶಲ್ಯರಹಿತ ಕಾರ್ಮಿಕರ ಅಡಿಯಲ್ಲಿ ಸೇರಿಸಲಾಗಿದ್ದು, ತಿಂಗಳಿಗೆ 524 ರೂ. ಹಣವನ್ನು ನೀಡಲಾಗುತ್ತದೆ. ಪ್ರಜ್ವಲ್ ರೇವಣ್ಣನ ಕಾರ್ಯಕ್ಷಮತೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಅವಲಂಬಿಸಿ ವೇತನವನ್ನು ಅರೆ-ಕೌಶಲ್ಯ ಅಥವಾ ಕೌಶಲ್ಯಪೂರ್ಣ ವರ್ಗಗಳಿಗೆ ಅಪ್‌ಗ್ರೇಡ್ ಮಾಡುವ ಸಾಧ್ಯತೆಗಳಿರುತ್ತವೆ ಎಂದು ವರದಿಗಳು ಉಲ್ಲೇಖಿಸಿವೆ.

ಕೋರ್ಟ್​ ಅಂಗಳದಲ್ಲಿ ಪ್ರಜ್ವಲ್ ಕೋರಿದ್ದೇನು?

ವರದಿಗಳ ಪ್ರಕಾರ, ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನ ವಿಚಾರಣೆಯಲ್ಲಿ, “ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಹಲವಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದೇನೆ ಎಂದು ಆರೋಪಿಸಿದ್ದಾರೆ. ಆದರೆ, ಅವರಲ್ಲಿ ಯಾರೊಬ್ಬರು ಸ್ವಯಂಪ್ರೇರಿತವಾಗಿ ಮುಂದೆ ಬಂದು ದೂರು ದಾಖಲಿಸಿಲ್ಲ. ಕಳೆದ ವರ್ಷ ಲೋಕಸಭಾ ಚುನಾವಣೆಗೆ ಇನ್ನು ಆರು ದಿನಗಳು ಬಾಕಿ ಇರುವಾಗ ಈ ರೀತಿ ಮಾಡಲಾಯಿತು. ಬಲವಂತವಾಗಿ ನನ್ನ ವಿರುದ್ಧ ದೂರು ಕೊಡಿಸಲಾಗಿದೆ. ರಾಜಕೀಯದಲ್ಲಿ ವೇಗವಾಗಿ ಬೆಳೆದಿದ್ದೇ ಇಂದು ನನಗೆ ಮುಳ್ಳಾಯಿತು. ನಾನು ಮೆರಿಟ್​ ವಿದ್ಯಾರ್ಥಿ. ಬಿಇ ಮೆಕ್ಯಾನಿಕಲ್ ಪದವೀಧರ. ಕಳೆದ ಆರು ತಿಂಗಳಿನಿಂದ ನಮ್ಮ ತಂದೆ-ತಾಯಿಯ ಮುಖ ನೋಡಿಲ್ಲ. ಶಿಕ್ಷೆ ಪ್ರಕಟಿಸುವಾಗ ನನ್ನ ಪೋಷಕರನ್ನು ಪರಿಗಣಿಸಿ” ಎಂದು ಪ್ರಜ್ವಲ್​ ಅಳಲು ವ್ಯಕ್ತಪಡಿಸಿದ್ದ. ಇದೆಲ್ಲವನ್ನೂ ಆಲಿಸಿದ ಬಳಿಕವೇ ನ್ಯಾಯಾಲಯ, ಅಪರಾಧಿಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.

ಗಟ್ಟಿಯಾಗಿ ಸಾಕ್ಷಿ ಹೇಳಿದ್ದು ಮನೆ ಕೆಲಸದಾಕೆ!

ಪ್ರಜ್ವಲ್ ವಿರುದ್ಧ ದಾಖಲಾಗಿರುವ ನಾಲ್ಕು ಕೇಸ್​ಗಳ ಪೈಕಿ, ಮೈಸೂರಿನ ಕೆ.ಆರ್.​​ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಕೇಸ್​ ಬಲವಾಯಿತು. ಈ ಪ್ರಕರಣದ ಸಂತ್ರಸ್ತೆ ಗಟ್ಟಿಯಾಗಿ ನಿಂತಿದ್ದೇ ಅಪರಾಧಿಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆಗೆ ಗುರಿಯಾಗುವಂತಾಯಿತು. ಕೇವಲ ಇದೊಂದು ಕೇಸ್​ನಲ್ಲಿ ಪ್ರಜ್ವಲ್​ಗೆ ಕಠಿಣ ಶಿಕ್ಷೆ ವಿಧಿಸಿರುವ ಕೋರ್ಟ್​, ಉಳಿದ ಮೂರು ಕೇಸ್​ಗಳನ್ನು ಪರಿಶೀಲಿಸಿದರೆ, ಇನ್ಯಾವ ಶಿಕ್ಷೆಯನ್ನು ವಿಧಿಸಲಿದೆ ಎಂಬುದೇ ಹಲವರ ಕುತೂಹಲ. ಸಂತ್ರಸ್ತ ಮಹಿಳೆ ಕೋರ್ಟ್​ನಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಗಟ್ಟಿಯಾಗಿ ನಿಂತಿದ್ದೇ ಇಂದು ಆಕೆಗೆ ಜಯ ತಂದುಕೊಟ್ಟಿದೆ. ಮತ್ತು ಮಾಜಿ ಸಂಸದನನ್ನು ಜೀವನಪರ್ಯಂತ ಜೀವಾವಧಿ ಶಿಕ್ಷೆ ಅನುಭವಿಸುವಂತೆ ಮಾಡಿದೆ.