ಬೆಂಗಳೂರು:
ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ, ಜೆಡಿಎಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರೆ, ಮಿತ್ರ ಪಕ್ಷವಾದ ಬಿಜೆಪಿ ಕೂಡ ತೀವ್ರ ಮುಜುಗರ ಅನುಭವಿಸುವಂತಾಗಿದೆ.
ಮೊದಲ ಹಂತದ ಚುನಾವಣೆ ಮುಗಿದ ಬಳಿಕ ಮನೆ ಸೇರಿಕೊಂಡ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮೌನಕ್ಕೆ ಶರಣಾಗಿದ್ದಾರೆ. ಎರಡನೇ ಹಂತದ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿಬೇಕಾಗಿದ್ದ ಗೌಡರು ಈ ಪ್ರಕರಣದಿಂದಾಗಿ ಸಾರ್ವಜನಿಕರ ಅಂತರ ಕಾಯ್ದುಕೊಂಡಿದ್ದಾರೆ.
ಜೆಡಿಎಸ್ ಮುಜುಗರದಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಈ ಘಟನೆ ಜೆಡಿಎಸ್ ಪಕ್ಷದ ಅಂತಃಸತ್ವವನ್ನು ನಡುಗಿಸಿದೆ ಎನ್ನುವುದು ಆ ಪಕ್ಷದ ಮುಖಂಡರ ನೋವು. ಸಂಸದ ಪ್ರಜ್ವಲ್ ಅವರನ್ನು ಪಕ್ಷದಿಂದ ಅಮಾನತ್ತು ಮಾಡಿದ್ದರೂ ಮುಜುಗರ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.
ರಾಜ್ಯದಲ್ಲಿ ರಾಜಕೀಯ ಮೂರನೇ ಶಕ್ತಿಯಾಗಿದ್ದ ಜೆಡಿಎಸ್ ಈಗ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಳಿ ವಯಸ್ಸಿನಲ್ಲಿ ಇಂಥದ್ದೆನೆಲ್ಲವನ್ನು ನೋಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಇದನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ದೇವೇಗೌಡರು, ಪಕ್ಷದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲೆ ಅಬ್ಬರಿಸಿದ್ದು, ಅವರನ್ನು ಸಂಪುಟದಿಂದ ಹೊರಗಿಡಬೇಕು ಎಂದು ಆಗ್ರಹಿಸಿದ್ದಾರೆ.
ಲೋಕಸಭೆ ಚುನಾವಣೆ ಪ್ರಾರಂಭವಾದ ಸಂದರ್ಭದಿಂದಲೂ ನಾನಾ ಕಾರಣಕ್ಕಾಗಿ ವಾಗ್ಯುದ್ದ ಮಾಡುತ್ತಿದ್ದ ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಪರಸ್ಪರ ಇನ್ನಷ್ಟು ವೈಯುಕ್ತಿಕವಾದ ನೆಲೆಯಲ್ಲಿ ಆರೋಪ ಪ್ರತ್ಯಾರೋಪದಲ್ಲಿ ಮುಳುಗಿ ಹೋಗಿದ್ದಾರೆ. ಈಗ ಪ್ರಜ್ವಲ್ ಪ್ರಕರಣ ವೈಯುಕ್ತಿಕ ದ್ವೇಷಕ್ಕೆ ಇನ್ನಷ್ಟು ಇಂಬು ನೀಡಿದೆ.
ಜೆಡಿಎಸ್ ಮೇಲೆ ಆಗುತ್ತಿರುವ ದಾಳಿಯಿಂದ ವಿಚಲಿತವಾಗದೆ, ಸಮಾಧಾನದಿಂದ ಪರಿಸ್ಥಿತಿಯನ್ನು ನಿಭಾಯಿಸುವಂತೆ ದೊಡ್ಡಗೌಡರು ಕಿವಿಮಾತು ಹೇಳಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಎಚ್ಚರದಿಂದ ಹೆಜ್ಜೆ ಇಡುತ್ತಿದ್ದಾರೆ.