ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಜ್ಞಾ ಫೆಸ್ಟ್​ನಲ್ಲಿ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಾದಿರಾಜ ಭಟ್​, ಡಾ. ಎ.ಪಿ. ಭಟ್​, ಡಾ. ರಾಮು ಎಲ್​., ಡಾ. ರಮೇಶ್​ ಟಿ.ಎಸ್​., ಜಯಲಕ್ಷ್ಮೀ, ಪ್ರತಿಭಾ ಆಚಾರ್ಯ, ಡಾ. ಮಂಜುನಾಥ ಕರಬ, ಡಾ. ವಿನಯಕುಮಾರ್​, ಮಾನುಷ್​ ಕೋಟ್ಯಾನ್​, ಅಮೃತಾ ಭಟ್​, ಚೇತನಾ ಪೈ, ನಿಕ್ಷಿತಾ ಇದ್ದರು. 
ನ್ಯೂಸ್

ಪ್ರತಿಭೆ ಅನಾವರಣಕ್ಕೆ ಪ್ರಜ್ಞಾ ಫೆಸ್ಟ್​ ಉತ್ತಮ ವೇದಿಕೆ

ವಿದ್ಯಾರ್ಥಿಗಳ ಕೌಶಲಕ್ಕೆ ವಾದಿರಾಜ ಭಟ್​ ಮೆಚ್ಚುಗೆ | ಉತ್ಸವ ಸಮಾರೋಪ

ವಿಜಯವಾಣಿ ಸುದ್ದಿಜಾಲ ಉಡುಪಿ
ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಪ್ರಜ್ಞಾ ಫೆಸ್ಟ್​ ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ ಎಂದು ಅಂಬಾಗಿಲು ಕರ್ನಾಟಕ ಬ್ಯಾಂಕ್​ ಪ್ರಾದೇಶಿಕ ಕಚೇರಿಯ ಎಜಿಎಂ ವಾದಿರಾಜ ಭಟ್​ ಹೇಳಿದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ (ಸ್ವಾಯತ್ತ) ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಅಂತರ್​ ಕಾಲೇಜುಗಳ 'ಪ್ರಜ್ಞಾ ಫೆಸ್ಟ್​-2024' ಕಾರ್ಯಕ್ರಮದ ಸಮಾರೋಪದ ನಿಮಿತ್ತ ಭಾನುವಾರ ಆಯೋಜಿಸಿದ್ದ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಉಜ್ವಲ ಭವಿಷ್ಯ

ಅದಮಾರು ಮಠ ಶಿಕ್ಷಣ ಮಂಡಳಿಯ ಉಡುಪಿ ವಿಭಾಗದ ಆಡಳಿತಾಧಿಕಾರಿ ಡಾ. ಎ.ಪಿ. ಭಟ್​ ಮಾತನಾಡಿ, ಪೂರ್ಣಪ್ರಜ್ಞ ಕಾಲೇಜಿನ ಕ್ಯಾಂಪಸ್​ಗೆ 'ಅಬ್ಜಾರಣ್ಯ' ಎನ್ನುವ ಹೆಸರಿದೆ. ಇದು ಚಂದ್ರ ತಪಸ್ಸು ಮಾಡಿದ ಪ್ರದೇಶವೆಂಬ ಪ್ರತಿತಿ ಇದೆ. ಇಂತಹ ಪೌರಾಣಿಕ ಪ್ರದೇಶದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದೀರಿ. ವಿವಿಧ ಕಾಲೇಜುಗಳ ಒಂದೂವರೆ ಸಾವಿರದಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ತಮಗೆಲ್ಲ ಉಜ್ವಲ ಭವಿಷ್ಯವಿದೆ ಎಂದರು.

ವಿದ್ಯಾರ್ಥಿಗಳ ಬದುಕು ಹಸನು

ಪೂರ್ಣಪ್ರಜ್ಞ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಡಾ. ಎಂ.ಆರ್​. ಹೆಗಡೆ ಮಾತನಾಡಿ, ಪರಮಾತ್ಮ ನೀಡಿದ ಅಪರಿಮಿತ ಶಕ್ತಿ ಬಳಸಿಕೊಂಡು, ಪ್ರತಿಭೆ ಪ್ರಕಟಪಡಿಸಿದಾಗ ಎಲ್ಲ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ ಎಂದರು.

ಪೂರ್ಣಪ್ರಜ್ಞ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್​., ಪ್ರಜ್ಞಾ ಉತ್ಸವದ ಮುಖ್ಯ ಸಂಯೋಜಕ ಡಾ. ರಮೇಶ್​ ಟಿ.ಎಸ್​., ಸಹ ಸಂಯೋಜಕಿ ಜಯಲಕ್ಷ್ಮೀ, ಶೈಕ್ಷಣಿಕ ಸ್ಪರ್ಧೆಗಳ ಸಂಯೋಜಕಿ ಪ್ರತಿಭಾ ಆಚಾರ್ಯ, ಸಾಂಸ್ಕೃತಿಕ ಸ್ಪರ್ಧೆಗಳ ಸಂಯೋಜಕ ಡಾ. ಮಂಜುನಾಥ ಕರಬ, ಐಕ್ಯುಎಸಿ ಸಂಯೋಜಕ ಡಾ. ವಿನಯಕುಮಾರ್​, ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾನುಷ್​ ಕೋಟ್ಯಾನ್​, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಅಮೃತಾ ಭಟ್​, ಚೇತನಾ ಪೈ, ನಿಕ್ಷಿತಾ ಉಪಸ್ಥಿತರಿದ್ದರು.

ಇತಿಹಾಸ ವಿಭಾಗದ ಮುಖ್ಯಸ್ಥ ಮಹೇಶ್​ ಶೆಟ್ಟಿ ಸ್ವಾಗತಿಸಿದರು. ಆಂಗ್ಲಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್​ ಸತ್ಯಮೂರ್ತಿ ಸ್ವಾಗತಪುಷ್ಪ ನೀಡಿದರು. ಡಾ. ಮಂಜುನಾಥ ಕರಬ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಮಲತಾ ನಿರೂಪಿಸಿದರು.

ಕುಂದಾಪುರದ ಹೆಗ್ಡೆ ಕಾಲೇಜು ಪ್ರಥಮ

ರಾಜ್ಯ ಮಟ್ಟದ ಅಂತರ್​ ಕಾಲೇಜುಗಳ 'ಪ್ರಜ್ಞಾ ಫೆಸ್ಟ್​' ಕಾರ್ಯಕ್ರಮದಲ್ಲಿ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಸಮಗ್ರ ತಂಡ ಪ್ರಶಸ್ತಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ, 10 ಸಾವಿರ ರೂ. ಬಹುಮಾನ ಹಾಗೂ ಬೃಹತ್​ ಶೀಲ್ಡ್​ ಗೆದ್ದುಕೊಂಡಿತು. ಕಟಪಾಡಿಯ ತ್ರಿಶಾ ಕಾಲೇಜು ದ್ವೀತಿಯ ಪ್ರಶಸ್ತಿ ಗಳಿಸಿತು. ಪ್ರಜ್ಞಾ ಫೆಸ್ಟ್ -2024 ಉತ್ಸವದ ಶೈಕ್ಷಣಿಕ ಹಾಗೂಸಾಂಸ್ಕೃತಿಕ ವಿಭಾಗಗಳಲ್ಲಿ 45 ಬಗೆಯ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ರಾಜ್ಯದ 25 ಕಾಲೇಜುಗಳು ಭಾಗವಹಿಸಿದ್ದವು. ಡಾ. ರಮೇಶ್​ ಟಿ.ಎಸ್​ ಸಮಗ್ರ ತಂಡ ಪ್ರಶಸ್ತಿ ವಿಜೇತರ ಪಟ್ಟಿ ವಾಚಿಸಿದರು.