ನ್ಯೂಸ್

ನಾಲಿಗೆಯೇ ಕೇಶವನನ್ನು ಸ್ತುತಿಸು... ಮನಸ್ಸೇ, ಶ್ರೀಧರನನ್ನು ಭಜಿಸು

ಆಧ್ಯಾತ್ಮಿಕ ಜೀವನಮಾಡುವುದೆಂದರೆ ಎಲ್ಲವನ್ನೂ ತೊರೆದು ಸಂನ್ಯಾಸಿಗಳ ಹಾಗಿರಬೇಕು ಎಂದು ಕೆಲವರು ಎಣಿಸುತ್ತಾರೆ. ಅಂತಹ ಜೀವನವು ಶ್ರೇಷ್ಠವೆನಿಸಬಹುದಾದರೂ, ನಮ್ಮ ಪರಂಪರೆಯು ಅದೊಂದೇ ಮಾರ್ಗವೆಂದಿಲ್ಲ. ಯಾವುದಾದರೂ ಸಣ್ಣ ಪ್ರಾಣಿಯೋ ಕೀಟವೋ ಬದುಕಿರು ವುದೋ ಇಲ್ಲವೋ ಎಂಬ ಸಂಶಯ ಬಂದರೆ, ಅದನ್ನು ಕೈಯಿಂದಲೋ ಕಡ್ಡಿಯಿಂದಲೋ ರ್ಸ³ಸಿ ನೋಡುವುದುಂಟು. ಏಕೆ? ಹಾಗೆ ಮಾಡಿದೊಡನೆ ಅದು ಸ್ವರಕ್ಷಣೆಗಾಗಿ ಚಲಿಸಲಾರಂಭಿ ಸುತ್ತದೆ. ಚಲನವು ಕಮೇಂದ್ರಿಯದ ಕೆಲಸ. ಕೈಕಾಲುಗಳು ಕಮೇಂದ್ರಿಯಗಳು. ಅವಾದರೂ ಏನಾದರೂ ಕೆಲಸವನ್ನು ಮಾಡುತ್ತಲೇ ಇರುತ್ತವೆ.

ಕೈಕಾಲುಗಳನ್ನಾಡಿಸದಿರು -ಎನ್ನುವುದೇ ಮಕ್ಕಳಿಗೊಂದು ದೊಡ್ಡಶಿಕ್ಷೆ ಯಾದೀತು! ಪಾಣಿ- ಪಾದಗಳಲ್ಲದೆ, ಮೂತ್ರದ್ವಾರ-ಮಲದ್ವಾರ ಗಳೂ ಕಮೇಂದ್ರಿಯಗಳೇ. ಮಾತನಾಡಲು ಬೇಕಾದ ನಾಲಿಗೆಯೂ ಕಮೇಂದ್ರಿಯವೇ. ಹೀಗೆ ಐದು ಕಮೇಂದ್ರಿ ಯಗಳು. ಪಂಚಕಮೇಂದ್ರಿಯ ಗಳಲ್ಲದೆ, ಪಂಚಜ್ಞಾನೇಂದ್ರಿಯಗಳೂ ಉಂಟು: ಕಣ್ಣು- ಕಿವಿ- ಮೂಗು- ಚರ್ಮ- ನಾಲಿಗೆ. ಹೀಗೆ ನಾಲಿಗೆಯೆಂಬುದು ಜ್ಞಾನೇಂದ್ರಿ ಯವೂ ಹೌದು, ಕಮೇಂದ್ರಿಯವೂ ಹೌದು. ಜ್ಞಾನೇಂದ್ರಿಯ-ಕಮೇಂದ್ರಿಯಗಳೆರಡಕ್ಕೂ ಮನಸ್ಸು ಒಡೆಯ. ಮನಸ್ಸೂ ಇತ್ತ ಜ್ಞಾನೇಂದ್ರಿಯವೆಂದೂ ಹೌದು, ಕಮೇಂದ್ರಿಯವೂ ಹೌದು. ಹೀಗಾಗಿ ನಾಲಿಗೆಯನ್ನೂ ಮನಸ್ಸನ್ನೂ ಉಭಯಾತ್ಮಕವೆಂದು ಚಿತ್ರಿಸಲಾಗಿದೆ. ಎಂದೇ ನಾಲಿಗೆಯೇನನ್ನು ನುಡಿಯುತ್ತಿದೆ, ಅದರ ಹಿಂದಿದ್ದು ಅದನ್ನಾಡಿಸುವ ಮನಸ್ಸೇನನ್ನು ಚಿಂತಿಸುತ್ತಿದೆ ಎಂಬುದರ ಬಗ್ಗೆ ಗಮನಕೊಡುವುದು ಮುಖ್ಯವಾಗು ತ್ತದೆ. ದುಷ್ಟಸಂಸ್ಕಾರಗಳುಳ್ಳವರಿಗೆ ದುಷ್ಟವಾದ ಆಲೋಚನೆಗಳೂ ಅವನ್ನನುಸರಿಸಿದ ನುಡಿಗಳೂ ಬರತಕ್ಕವೇ. ಎಂದೇ ಮಾತನ್ನು ಕುರಿತಾದ ಎಚ್ಚರ, ಜೊತೆಗೇ ಮನಸ್ಸನ್ನು ಕುರಿತಾದ ಎಚ್ಚರ - ಇವು ಅವಶ್ಯವೆನಿಸುವುವು. ಎಂದೇ ಕುಲಶೇಖರ ಆಳ್ವಾರರು, ಕೃಷ್ಣನನ್ನು ಕುರಿತಾದ ತಮ್ಮ ಪ್ರಸಿದ್ಧ-ಸ್ತೋತ್ರವಾದ ಮುಕುಂದ ಮಾಲೆಯ ಶ್ಲೋಕವೊಂದರಲ್ಲಿ, ಮೊದಲು ನಾಲಿಗೆಯನ್ನೂ, ಜೊತೆಗೇ ಮನಸ್ಸನ್ನೂ, ಸಂಬೋಧಿಸಿ ಹಿತವಚನಗಳನ್ನು ಹೇಳಿದ್ದಾರೆ. ನಾಲಿಗೆಗೆ ಅವರು ಹೇಳಿರುವ ಮಾತೇ ‘ಜಿಹ್ವೇ ಕೀರ್ತಯ ಕೇಶವಂಃ’- ‘ನಾಲಿಗೆಯೇ, ಕೇಶವನನ್ನು ಕೀರ್ತಿಸು’ ಎಂದು; ಜೊತೆಗೇ ‘ಮನಸ್ಸಿಗೆ ಮನಸ್ಸೇ, ಶ್ರೀಧರನನ್ನು ಭಜಿಸು’ ಎಂದು. ಇವುಗಳೊಂದಿಗೆ ಮಿಕ್ಕ ಇಂದ್ರಿಯಗಳೂ ಸಹಕರಿಸಿ, ಕ್ರಮೇಣ ಧ್ಯಾನದಲ್ಲಿ ನಿಲ್ಲುವಂತಾ ಗಬೇಕು.ಧ್ಯಾನಾವಸ್ಥೆಯು ಒಂದರ್ಥದಲ್ಲಿ ನಿದ್ರಾವಸ್ಥೆಯಂತೆಯೇ. ಆಗಲೂ ಕಣ್ಣು ಮುಚ್ಚಿರುವುದರಿಂದ ಏನೂ ಕಾಣದು, ತನ್ಮಯತೆಯೇ ಇದ್ದರೆ ಏನೂ ಕೇಳಿಸದು ಕೂಡ. ಕಣ್ಣು-ಕಿವಿಗಳೇ ಕೆಲಸ ಮಾಡವೆಂದಮೇಲೆ ಇನ್ನು ಮಿಕ್ಕ ಇಂದ್ರಿಯಗಳ ಬಗ್ಗೆ ಹೇಳಲೇಬೇಕಿಲ್ಲ.

ನಿದ್ರೆಗೂ ಧ್ಯಾನಾವಸ್ಥೆಗೂ ವ್ಯತ್ಯಾಸವೇನು? ಎರಡರಲ್ಲೂ ಸುಖಾನುಭವವೇ. ಆದರೂ ನಿದ್ರೆಯಲ್ಲಿ ದೊರಕುವ ಸುಖವು ಜಾಡ್ಯವುಳ್ಳದ್ದು. ಧ್ಯಾನಲಭ್ಯವಾದ ಸುಖವು ಸಾತ್ತಿ್ವಕಸುಖ. ನಿದ್ರಾಸುಖವು ಎಲ್ಲರಿಗೂ ನಿತ್ಯವೂ ಬೇಕಾದದ್ದೇ. ಧ್ಯಾನಸುಖವೂ ಆಸೆಪಡಬೇಕಾದದ್ದೇ. ಧ್ಯಾನ ಕ್ಕೆಂದು ಕುಳಿತರೆ ಸಾಕು, ಎಲ್ಲ ಇಂದ್ರಿಯಗಳೂ ಪ್ರತಿಭಟಿಸುವುವು. ಏಕೆ? ಎಲ್ಲ ಇಂದ್ರಿಯಗಳಿಗೂ ಸದಾ ಬಹಿಮುಖವಾಗಿರುವುದೇ ಅಭ್ಯಾಸ ವಾಗಿರುವುದರಿಂದ. ಥಟ್ಟನೆ ಅಂತಮುಖವಾಗೆಂದರೆ ಅವಕ್ಕಾಗದು. ಅದಕ್ಕೇನು ಮಾಡಬೇಕು?ಬಹಿಮುಖವಾಗಿ ಮಾಡುವ ಕೆಲಸಗಳಲ್ಲೇ ಏನನ್ನು ಮಾಡಿದರೆ ಧ್ಯಾನಕ್ಕೆ ಅನುಕೂಲಿಸುವಂತಾ ಗುವುದೋ ಅಂತಹ ಕೆಲಸಗಳನ್ನೇ ಅವಿಂದ ಮಾಡಿಸಬೇಕು. ನಾಲಿಗೆಗೆ ಅಂತಹ ಒಂದು ಕೆಲಸವೇ ಹೀಗೆ ಭಗವಂತನನ್ನು ಕೀರ್ತಿಸುವುದು- ಎಂಬುದು. ಶ್ರೀರಂಗ ಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ ನಾಲಿಗೆಯ ಸ್ವಭಾವವೇ ಲೊಟ ಗುಟ್ಟುವುದು. ಅದಕ್ಕೆ ಸುಮ್ಮನಿರ ಲಾಗುವುದಿಲ್ಲ. ಅದಕ್ಕೆ ಕೆಲಸ ಬೇಕು. ಆದ್ದರಿಂದ ಅದಕ್ಕೆ ಕೆಲಸವಿರಲಿ: ಏನೇನೋ ಮಾತನಾಡಬೇಡ, ಭಗವಂತನ ವಿಷಯವಾಗಿ ಮಾತನ್ನಾಡು. ಹಾಗೆ ಮಾಡಿದರೆ ಇಂದ್ರಿಯಕ್ಕೆ ಕೆಲಸವೂ ಆಯಿತು, ಜೀವನಿಗೆ ಲಕ್ಷ್ಯನಾದ ದೇವನ ನೆನಪೂ ಆಯಿತು. ಇದು ಜಿಹ್ವೆಯ ಸಮಾಚಾರವಾಯಿತು. ಮನಸ್ಸಂತೂ ಮೇಲೆ ಹತ್ತಿಯೂ ಸುಲಭ ವಾಗಿ ಜಾರಿಬಿಡುವುದು! ಎಂದೇ ಎಂದೂ ಜಾರದವನನ್ನು, ಎಂದೂ ಚ್ಯುತಿಯಿಲ್ಲದವ ನಾದ ಅಚ್ಯುತನನ್ನು, ಭಜಿಸೆಂದು ಮನಸ್ಸಿಗೆ ಉಪದೇಶ. ಹೀಗೆ ಉಳಿದ ಇಂದ್ರಿಯಗಳಿಗೂತಕ್ಕ ಕೆಲಸಗಳು. ಕೈಗಳಿಗೆ ಆತನ ಅರ್ಚನೆ. ಕಿವಿಗಳಿಗೆ ಆತನ ಕಥಾಶ್ರವಣ, ಕಣ್ಣುಗಳಿಗೆ ಆತನ ದರ್ಶನ.ಕಾಲ್ಗಳಿಗೆ ಆತನ ಆಲಯಕ್ಕೆ ನಡೆ. ಮೂಗಿಗೆ ಆತನಪಾದ-ತುಲಸಿಯ ಆಘ್ರಾಣನ. ಇವೆಲ್ಲದರಿಂದಾಗಿ, ಮತ್ತು ಇವೆಲ್ಲಕ್ಕೂ ಶಿಖರಪ್ರಾಯವಾಗಿ, ಸಹಜವಾಗಿ ಕೃಷ್ಣಪ್ರಭುವಿಗೆ ತಲೆಬಾಗುವುದಾಗುತ್ತದೆ. ಹೀಗೆ ಎಲ್ಲ ಇಂದ್ರಿಯ ಗಳಿಗೂ ತಕ್ಕ ತಕ್ಕ ಕೆಲಸವಿತ್ತು ಭಗವಂತನತ್ತ ಅಭಿಮುಖತೆ ಯನ್ನು ವ್ಯವಸ್ಥೆಗೊಳಿಸಿದ್ದಾರೆ, ಜ್ಞಾನಿಗಳಾದ ನಮ್ಮ ಪೂರ್ವಜರು. ಇಂತಾದಾಗ ಕ್ರಮೇಣ ಅಂತಮುಖತೆಯು ಸಿದ್ಧಿಸಿ ಧ್ಯಾನವೇ ಸಾಧಿತವಾಗುವುದು. ಧ್ಯಾನ ಯೋಗದಲ್ಲಿ ಪ್ರಗತಿಯೇ ಅಧ್ಯಾತ್ಮಕ್ಕೆ ಪೋಷಕವೆನಿಸುವುದಲ್ಲವೇ?

(ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು ಅಷ್ಟಾಂಗಯೋಗ ವಿಜ್ಞಾನಮಂದಿರಂ)