ನವದೆಹಲಿ: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ಮಧ್ಯಪ್ರದೇಶದ ಭೂಪಾಲ್ ನಿವಾಸಕ್ಕೆ ಶಂಕಾಸ್ಪದ ಪತ್ರವೊಂದನ್ನು ಕಳುಹಿಸಲಾಗಿದ್ದು, ಪತ್ರದಲ್ಲಿ ಪೌಡರ್ ರೀತಿಯ ಪದಾರ್ಥ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಪೊಲೀಸ್ ಮೂಲಗಳ ಪ್ರಕಾರ ಪತ್ರದ ಮೇಲೆ ಉರ್ದು ಭಾಷೆಯಲ್ಲಿ ಬರೆಯಲಾಗಿದ್ದು, ಇನ್ನಿತರ ಪತ್ರಗಳನ್ನು ಅದರೊಳಗೆ ಸೇರಿಸಿ ಕಳುಹಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಠಾಕೂರ್, ಇಂತಹ ಪತ್ರಗಳನ್ನು ಈ ಮುಂಚೆಯೂ ನಾನು ಸ್ವೀಕರಿಸಿದ್ದೇನೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ. ಆದರೆ, ಅವರು ಯಾವುದೇ ಕ್ರಮಕೈಗೊಂಡಿಲ್ಲ. ಇದೊಂದು ದೇಶ ವಿರೋಧಿಗಳ ದೊಡ್ಡ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.
ಠಾಕೂರ್ ಮನೆಯಲ್ಲಿದ್ದ ಮೂರರಿಂದ ನಾಲ್ಕು ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪತ್ರಗಳನ್ನು ಉರ್ದು ಭಾಷೆಯಲ್ಲಿ ಬರೆಯಲಾಗಿದೆ. ಈ ಬಗ್ಗೆ ಮಾಧ್ಯಮಗೊಂದಿಗೆ ಮಾತನಾಡಿರುವ ಭೂಪಾಲ್ ಡಿಐಜಿ ಇರ್ಷಾದ್ ವಾಲಿ, ನಾವು ಸಂಸದೆಯಿಂದ ದೂರು ಸ್ವೀಕರಿಸಿದ್ದೇವೆ. ಪತ್ರದೊಳಗೆ ಕೆಲ ಹಾನಿಕಾರಕ ಕೆಮಿಕಲ್ಸ್ ಇದ್ದವು ಎಂದು ಠಾಕೂರ್ ಆರೋಪ ಮಾಡಿದ್ದಾರೆ. ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಠಾಕೂರ್ ವಿಳಾಸ ಇರುವ ಕಂದು ಬಣ್ಣದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪತ್ರವು ಕೆಲ ವಿಷಕಾರಿ ಪದಾರ್ಥಗಳನ್ನು ಹೊಂದಿವೆ ಎಂದು ಬರೆದು ಜಾಲತಾಣದಲ್ಲಿ ಹರಿಬಿಡಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಪರೀಕ್ಷೆಗಾಗಿ ಪತ್ರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. (ಏಜೆನ್ಸೀಸ್)