ಸೇಂಟ್ ಲೂಯಿಸ್ (ಅಮೆರಿಕ): ಭಾರತದ ಗ್ರಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಕೊನೇ ಸುತ್ತಿನ ಪಂದ್ಯ ಬಾಕಿ ಇರುವಂತೆಯೇ ಸೇಂಟ್ ಲೂಯಿಸ್ ರ್‍ಯಾಪಿಡ್ ಆಂಡ್ ಬ್ಲಿಟ್ಜ್ ಚೆಸ್ (
St. Louis Rapid and blitz chess
) ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 20 ವರ್ಷದ ಪ್ರಜ್ಞಾನಂದ ಒಟ್ಟಾರೆ 23.5 ಅಂಕ ಗಳಿಸುವ ಮೂಲಕ ಉಜ್ಬೇಕಿಸ್ತಾನದ ಜಾವೋಖಿರ್ ಸಿಂಡರೋವ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದರು.
ಗ್ರಾಂಡ್ ಚೆಸ್ ಟೂರ್ನ (ಜಿಸಿಟಿ) ರ್‍ಯಾಪಿಡ್-ಬ್ಲಿಟ್ಜ್ ಸ್ಪರ್ಧೆಯ ಕೊನೇ ದಿನ ಒಂದೂ ಪಂದ್ಯವನ್ನು ಸೋಲದ ಪ್ರಜ್ಞಾನಂದ, ಮುಂಬರುವ ದಿನಗಳಲ್ಲಿ ನಡೆಯಲಿರುವ ಗ್ರಾಂಡ್ ಫಿನಾಲೆಗೆ ಅರ್ಹತೆಯನ್ನು ಬಹುತೇಕ ಖಾತ್ರಿಪಡಿಸಿಕೊಂಡರು. ಇದು ಅಧಿಕೃತವಾಗಲು ಗ್ರಾಂಡ್ ಚೆಸ್ ಟೂರ್ನಲ್ಲಿ ಕ್ಲಾಸಿಕಲ್ ಮಾದರಿಯಲ್ಲಿ ನಡೆಯಲಿರುವ ಹಾಲಿ ಋತುವಿನ ಕೊನೇ ಟೂರ್ನಿಯಲ್ಲಿ ಪ್ರಜ್ಞಾನಂದ ಹಾಲಿ ಫಾರ್ಮ್ ಕಾಯ್ದುಕೊಂಡು ಅಗ್ರ 3ರೊಳಗೆ ಸ್ಥಾನ ಗಳಿಸಬೇಕಿದೆ.
ರ್‍ಯಾಪಿಡ್ ವಿಭಾಗದಲ್ಲಿ ಸಿಂಡರೋವ್ಗಿಂತ ಅಲ್ಪ ಮುನ್ನಡೆ ಸಾಧಿಸಿದ್ದ ಪ್ರಜ್ಞಾನಂದ, ಬ್ಲಿಟ್ಜ್ನಲ್ಲಿ ಒಂದು ಪಂದ್ಯ ಸೋತರೂ, ಒಟ್ಟಾರೆ 18ರಲ್ಲಿ 11.5 ಅಂಕ ಕಲೆಹಾಕಿದರು. ಒಟ್ಟಾರೆ ಜಿಸಿಟಿ ರ್ಯಾಂಕಿಂಗ್ನಲ್ಲಿ ಪ್ರಜ್ಞಾನಂದ 2ನೇ ಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದಗೆ ಜಿಸಿಟಿಯಲ್ಲಿ ಇದು ಮೊದಲ ರ್‍ಯಾಪಿಡ್-ಬ್ಲಿಟ್ಜ್ ಪ್ರಶಸ್ತಿ ಗೆಲುವಾಗಿದೆ.