ನ್ಯೂಸ್

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಗ್ರಾಮೀಣರಿಗೆ ಉಚಿತ ಮಾರ್ಗದರ್ಶನ: ಯುಪಿಎಸ್‍ಸಿ ಸಾಧಕ ಪ್ರಫುಲ್ ದೇಸಾಯಿ

ಹುಕ್ಕೇರಿ(ಬೆಳಗಾವಿ): 2019ನೇ ಸಾಲಿನ ಯುಪಿಎಸ್‍ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಪ್ರಫುಲ್ ಕೆಂಪಣ್ಣ ದೇಸಾಯಿ 532ನೇ ರ‍್ಯಾಂಕ್​ ಗಳಿಸಿದ್ದಾರೆ.

ಕೃಷಿ ಅಥವಾ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಮಾಡುವಲ್ಲಿ ಆಸಕ್ತಿ ಹೊಂದಿರುವ ಪ್ರಫುಲ್ ಕೆಂಪಣ್ಣ ದೇಸಾಯಿ ಅವರಿಗೆ ಗ್ರಾಮೀಣ ಭಾಗದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಯುಪಿಎಸ್‍ಸಿ ಪರೀಕ್ಷೆ ಬರೆಯಬೇಕು ಎಂಬುದು ಅವರ ಮಹದಾಸೆ. ಅದಕ್ಕಾಗಿ ಹುಕ್ಕೇರಿ ತಾಲೂಕಿನಲ್ಲಿ ಯಾರಾದರೂ ಯುಪಿಎಸ್‍ಸಿ ಪರೀಕ್ಷೆ ಬರೆಯಲು ಆಸಕ್ತಿ ವಹಿಸಿ ಸಂಪರ್ಕಿಸಿದರೆ, ಅವರಿಗೆ ಉಚಿತವಾಗಿ ಮಾರ್ಗದರ್ಶನ ನೀಡುವುದಾಗಿ ತಿಳಿಸಿದ್ದಾರೆ.

ಬಾಲ್ಯದಿಂದಲೂ ಐಎಎಸ್ ಅಧಿಕಾರಿ ಆಗುವ ಕನಸು ಕಂಡಿದ್ದ ಪ್ರಫುಲ್ ಬಿಇ ಓದು ಮುಗಿದ ಬಳಿಕ ಯುಪಿಎಸ್‍ಸಿ ಪರೀಕ್ಷೆ ಎದುರಿಸಲು ಸಿದ್ಧತೆ ಆರಂಭಿಸಿ, ಎರಡು ಬಾರಿ ಯಶಸ್ಸಿನ ಸಮೀಪ ಬಂದು ವಿಫಲರಾದರು. ಛಲ ಬಿಡದ ತ್ರಿವಿಕ್ರಮನಂತೆ ಮೂರನೇ ಯತ್ನದಲ್ಲಿ ಯಶ ಕಂಡಿದ್ದಾರೆ. ತಂದೆ ಕೆಂಪಣ್ಣ ದೇಸಾಯಿ ಬಿಎ ಪದವೀಧರರಾಗಿದ್ದು, ಕೃಷಿ ಮತ್ತು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ತಾಯಿ ಮಂಗಲ ಗೃಹಿಣಿ. ಹಿರಿಯ ಸಹೋದರಿ ಬೆಳಗಾವಿ ಸಿವಿಲ್ ಕೋರ್ಟ್‍ನಲ್ಲಿ ಎಸ್‍ಡಿಸಿ ಆಗಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಕನ್ನಡ ಮಾಧ್ಯಮದಲ್ಲೇ ಓದಿದ್ದ ಪ್ರಫುಲ್ ಕೆಂಪಣ್ಣ ದೇಸಾಯಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್​ ಅಗಿರುವುದು ಗ್ರಾಮೀಣ ಮಕ್ಕಳಾದಿಯಾಗಿ ಎಲ್ಲರಿಗೂ ಸ್ಫೂರ್ತಿ.