‘ಬಲಂ ಬಲಂ ಅಭ್ಯಾಸಬಲಮ್ ಎಂಬ ಮಾತಿದೆ. ಅಭ್ಯಾಸಬಲವೇ ಅತ್ಯಂತ ಶ್ರೇಷ್ಠ. ನಿರಂತರ ಅಭ್ಯಾಸ ಮಾಡಿದರೆ ಯಾವುದು ತಾನೆ ಅಸಾಧ್ಯ? ಯಾರಿಗೂ ಬೇಡದವನಾದ ಬೇಡ ವಾಲ್ಮೀಕಿಯಾಗಲಿಲ್ಲವೇ? ದಡ್ಡರಲ್ಲಿ ಮಹಾದಡ್ಡನಾದ ಕಾಳಿದಾಸ ವರಕವಿಯಾಗಲಿಲ್ಲವೇ? ದೈವಾನುಗ್ರವಿದ್ದರೆ, ಅಭ್ಯಾಸಿಯಾದರೆ ಅಜ್ಞನೂ ತಜ್ಞನಾಗುತ್ತಾನೆ. ಹುಟ್ಟಿದಾಗಲೇ ಎಲ್ಲವೂ ಬರುವುದಿಲ್ಲ. ನಿರಂತರ ಅಭ್ಯಾಸ ಎಲ್ಲವನ್ನೂ ತಿಳಿಸಿಕೊಡುತ್ತದೆ; ಕಲಿಸಿಕೊಡುತ್ತದೆ. ನಮಗೆ ತಜ್ಞನಾಗುವ ಹಂಬಲ ಬಲವಾಗಿ ಇರಬೇಕು. ಅದಕ್ಕೆ ಪೂರಕವಾಗಿ ಪ್ರಯತ್ನ ಸಾಗಬೇಕು. ಪರ್ವತಗಳೂ ಇಲ್ಲವಾಗುವುದನ್ನೂ ಕಂಡಿದ್ದೇವೆ; ಕೇಳಿದ್ದೇವೆ. ಕಲ್ಲಿನ ರಾಶಿಯೂ ಕ್ರಮೇಣ ಪುಡಿಪುಡಿಯಾಗುತ್ತದೆ. ಇವುಗಳೆಲ್ಲವೂ ಅಭ್ಯಾಸಬಲದಿಂದ, ಸಹಜವಾದ ಪ್ರಾಕೃತಿಕ ಕ್ರಿಯೆಯಿಂದ.
ಪ್ರಪಂಚದಲ್ಲಿ ಯಾವುದೂ ಇದ್ದಂತೆ ಇರುವುದಿಲ್ಲ, ಬದಲಾಗುತ್ತದೆ. ಕ್ರಮೇಣ ಮೂಲಸ್ವರೂಪ ನಾಶವಾಗುತ್ತದೆ. ಎಂತಹ ಮಹಾವೃಕ್ಷವಾಗಿ ರಲಿ, ಗಟ್ಟಿಮುಟ್ಟಾದ ಮರವಾಗಿರಲಿ, ಹುಳು ಹಿಡಿಯಿತೆಂದರೆ ಮುಗಿದಂತೆ. ಹುಳುವೇ ಆ ಮರವನ್ನು ತಿಂದು ಮುಗಿಸುತ್ತದೆ. ಇವೆಲ್ಲವೂ ಪ್ರಕೃತಿ ನಿಯಮ ಅಥವಾ ಅಭ್ಯಾಸ, ಅಭ್ಯಾಸದ ಬಲವಿದ್ದರೆ ಏನನ್ನೂ ಸಾಧಿಸಬಹುದು. ನಿರಂತರ ಅಭ್ಯಾಸ ಮುಖ್ಯ. ಪರ್ವತ, ಕಲ್ಲು.. ಇತ್ಯಾದಿ ಕರಗುವುದು ಸಹಜಕ್ರಿಯೆ. ಮಳೆ, ಬಿಸಿಲು, ಗಾಳಿ ಇತ್ಯಾದಿಗಳಿಗೆ ಸಿಲುಕಿ ಹೀಗಾಗುವುದು ಪ್ರಾಕೃತಿಕ ನಿಯಮ. ಇದನ್ನು ತಡೆಯಲು ಸಾಧ್ಯವಿಲ್ಲ. ಹುಳು ಮರವನ್ನು ತಿನ್ನುವುದು ಅದರ ಸ್ವಭಾವ ಮತ್ತು ಅದರ ಅಭ್ಯಾಸ ಬಲ.
ಗೆದ್ದಲು ತಿನ್ನುವುದೂ ಅಷ್ಟೇ! ಇದನ್ನು ತಾತ್ಕಾಲಿಕವಾಗಿ ತಡೆಯುವ ಪ್ರಯತ್ನ ಮಾಡಬಹುದೇ ವಿನಾ ಶಾಶ್ವತವಾಗಿ ತಡೆಯುವುದು ದುಸ್ಸಾಧ್ಯ. ಆದರೆ ದಡ್ಡನು ಜಾಣನಾಗುವುದಕ್ಕೆ ಪ್ರಯತ್ನ ಬೇಕು. ಪ್ರಯತ್ನವಾದಿಗೆ ಅಸಾಧ್ಯವೆಂಬುದು ಇಲ್ಲ. ಪ್ರಯತ್ನದಿಂದ ಪಡೆಯಲು ಅಸಾಧ್ಯವಾದುದು ಯಾವುದೂ ಇಲ್ಲ, ಸಾಧಕರ ಜೀವನವನ್ನು ಗಮನಿಸಿದರೆ ಅವರೇರಿರುವ ಎತ್ತರ ಸಾಧನೆಯ ಫಲವೆಂದು ಗೊತ್ತಾಗುತ್ತದೆ. ಪ್ರಯತ್ನವೇ ಸಾಧನೆಯ ಮೂಲ. ಮೂಲವಿಲ್ಲದ ಯಾವುದೂ ಗಟ್ಟಿಯಾಗಿ ನಿಲ್ಲಲು ಅಸಾಧ್ಯ, ಬೆಳೆಯಲು ಅಶಕ್ಯ.