ನ್ಯೂಸ್

ಪರಿಪೂರ್ಣ ಕರ್ಮಾಚರಣೆಯಿಂದ ಪರಮ ಸಿದ್ಧಿ

ತಿಳಿಯುವುದು ಜ್ಞಾನಶಕ್ತಿ. ಯಾವುದನ್ನು? ಯಾರಿಂದ? ತನ್ನಿಂದ ತಾನೆಯೇ? ಸಂದರ್ಭದಿಂದಲೆ? ಘಟನೆಯಿಂದಲೆ? ಅದನ್ನು ಗ್ರಹಿಸುವುದು ಭಾವನೆಯೆ? ದೇಹವೇ? ಏನು? ಇತ್ಯಾದಿ ಸಾವಿರ ಪ್ರಶ್ನೆಗಳು ಉದ್ಭವಗೊಳ್ಳುವುವು. ದೇಹದ ವಾಂಛೆಯನ್ನು ನಿಗ್ರಹಿಸಬಹುದೇ ವಿನಾ ತಡೆಯಲಾಗದು. ಸಂಯಮ ಸುಲಭವಲ್ಲ.

ದೇಹವಾಂಛೆಯನ್ನು ಋಣಾನುಬಂಧವೆಂದು ತಿಳಿಯುವರು. ಋಣವಿದ್ದರೆ ಮಾತ್ರ ಬದುಕಿಗೆ ಬೇಕಾದ ಪಶು, ಪತ್ನಿ, ಸುತ, ಆಲಯಗಳು ಲಭಿಸುವುದು. ಋಣವೇ ಇಲ್ಲವಾದರೆ ಕನಸು ನನಸಾಗದು. ಋಣವೆಂದರೆ ಕೇವಲ ಸಾಲ ತೀರಿಸುವುದೇ ಅಥವಾ ಮುಂದುವರಿದ ಸಾಲವೇ? ಮಾತೃ, ಪಿತೃ, ದೇವ ಋಣಗಳ ಜೊತೆಗೆ ಗುರು ಋಣ, ಸಾಮಾಜಿಕ ಋಣಗಳೂ ಸೇರಿಕೊಂಡವು. ಋಣದ ಸೀಮಿತ ರೇಖೆ ಯಾವುದು ಎಂದು ನಿಖರವಾಗಿ ಹೇಳಲಸಾಧ್ಯ.

ಧರ್ಮರಾಜ ಮೊದಲ ದ್ಯೂತದಲ್ಲಿ ಹೆಂಡತಿಯನ್ನೇ ಜೂಜಿಗೆ ಪಣವಾಗಿಟ್ಟು ಸೋತ. ಕೇಶವನ್ನು ಹಿಡಿದೆಳೆದು ದ್ರೌಪದಿಯನ್ನು ತಂದಾಗ ಸೋಲಿನ ಋಣಬಾಧೆ ಎದುರಾಗಿತ್ತು. ಪಾಂಡವರನ್ನು ಋಣದಿಂದ ರಕ್ಷಿಸಿದವಳೇ ದ್ರೌಪದಿ. ಆದರೆ ಎಳೆದು ತಂದ ದುಶ್ಶಾಸನನ ರಕ್ತದ ಸಿಂಚನವಾದ ಮೇಲೆಯೇ ಮುಡಿಯನ್ನು ಕಟ್ಟಿಕೊಳ್ಳುವೆನೆಂಬ ದ್ರೌಪದಿಯ ಶಪಥ ಎರಡನೆಯ ದ್ಯೂತದ ನಂತರವೂ ಜೀವಂತವಾಗಿಯೇ ಉಳಿಯಿತು. ಧರ್ಮರಾಜನಿಗೆ ಅರಣ್ಯಕ್ಕೆ ಹೊರಡುವಾಗ ತಮ್ಮಂದಿರ ಪ್ರತಿಜ್ಞೆಗಳನ್ನು ತಡೆಹಿಡಿಯಲಾಗಿಲ್ಲ. ಯುಧಿಷ್ಠಿರನು ಮುಖವನ್ನು ಮುಚ್ಚಿಕೊಂಡು ಹೋದನು. ಭೀಮ ಎರಡೂ ಬಾಹುಗಳನ್ನೂ ಪದೆಪದೇ ನೋಡಿಕೊಳ್ಳುತ್ತ ಹೋದನು. ಅರ್ಜುನನು ದಾರಿಯುದ್ದಕ್ಕೂ ಮರುಳನ್ನು ಎರಚುತ್ತ ಹೋದನು. ಸಹದೇವನು ಮುಖಕ್ಕೆ ಮಣ್ಣನ್ನು ಬಳಿದುಕೊಂಡು ಹೋದನು. ನಕುಲನು ಮೈಯೆಲ್ಲವನ್ನೂ ದೂಳಿನಿಂದ ಮುಚ್ಚಿಕೊಂಡು ಹೋದನು. ದ್ರೌಪದಿಯು ಕೆದರಿದ ಕೇಶರಾಶಿಯಿಂದ ಮುಖವನ್ನು ಮುಚ್ಚಿಕೊಂಡು ಹೋದಳು. ಕುಲಗುರು ಧೌಮ್ಯರು ಕೈಯಲ್ಲಿ ದರ್ಭೆಯನ್ನು ಹಿಡಿದು ಸಾಮವೇದದ ರೌದ್ರ ಮತ್ತು ಯಾಮ್ಯಸಾಮಗಳನ್ನು ಹೇಳುತ್ತ ಹೋದರು. ಧರ್ಮಜನು ತನ್ನ ದೃಷ್ಟಿಯಿಂದ ಕೌರವರು ಸುಟ್ಟು ಹೋಗಬಾರದು ಎಂದು ಮುಖವನ್ನು ಮುಚ್ಚಿಕೊಂಡನು. ಭುಜಬಲದಲ್ಲಿ ತನಗೆ ಸರಿಸಾಟಿ ಯಾರಿಲ್ಲ ಎಂದು ಭುಜಗಳನ್ನು ನೋಡುತ್ತ ಭೀಮನು ಹೋದನು. ಅರ್ಜುನನು ಮರಳಿನಂತೆ ಬಾಣಗಳನ್ನು ಎರಚುವೆ ಎಂಬ ಭಾವನೆಯಿಂದ ಹೋದನು. ಸಹದೇವನು ದೃಷ್ಟಿಬಲದಿಂದ ಹಸ್ತಿನಾವತಿಯೇ ಉರಿದುಹೋಗದಿರಲಿ ಎಂದು ಮುಖಕ್ಕೆ ಮಣ್ಣು ಮುಚ್ಚಿಕೊಂಡು ಹೋದನು. ಅವನಿಗೆ ಭವಿಷ್ಯವನ್ನು ಅರಿಯುವ ಶಕ್ತಿ ಇತ್ತು. ನಕುಲನು ತನ್ನ ಸೌಂದರ್ಯಕ್ಕೆ ಯಾರೂ ಮಾರುಹೋಗದಿರಲಿ ಎಂದು ಧೂಳಿನಿಂದ ಮಣ್ಣು ಮುಚ್ಚಿಕೊಂಡು ಹೋದನು. ಹಸ್ತಿನಾವತಿಯ ಸ್ತ್ರೀಯರು ರಜಸ್ವಲೆಯಾಗಿ ಏಕವಸ್ತ್ರಧಾರಿಣಿಯರಾಗಿಯೇ ಸತ್ತವರಿಗೆ ತಿಲೋದಕವನ್ನು ಬಿಟ್ಟು ರಾಜ್ಯ ಸೇರಲಿ ಎಂದು ಕೆದರಿದ ಕೇಶದೊಡನೆ ದ್ರೌಪದಿ ಸಾಗಿದಳು. ಯುದ್ಧದ ನಂತರ ಇದೇ ಮಂತ್ರ ಉಚ್ಚರಿಸಲೆಂದು ಧೌಮ್ಯರು ರೌದ್ರಮಂತ್ರ ಹೇಳುತ್ತ ಸಾಗಿದರು. ಇದನ್ನು ಗಮನಿಸಿದರೆ, ಸ್ವಬುದ್ಧಿ, ಪರಿಸರ, ಆನುವಂಶಿಕತೆಗಿಂತಲೂ ಘಟನಾವಳಿಗಳೇ ಪ್ರಮುಖವೆನಿಸುವುದು. ನಡೆದ ಘಟನೆ, ಅದರಿಂದಾದ ಪ್ರಭಾವ ಮಾಸಲಾರದು. ಅದಕ್ಕಾಗಿ ಕೌರವರು ಮತ್ತು ಪಾಂಡವರಿಂದ ಯುದ್ಧದ ಸಿದ್ಧತೆಯಾಯಿತು. ಆದರೆ ಕೌರವನ ಇಲ್ಲವೇ ಧರ್ಮರಾಜನ ಗೆಲುವಿಗಾಗಿ ಯುದ್ಧವನ್ನು ಮಾಡಲು ಬಂದವರು ಯಾರೂ ಇಲ್ಲ. ಸೈನ್ಯದಲ್ಲಿ ಇರುವವರೆಲ್ಲ ತಮ್ಮ-ತಮ್ಮ ಸೇಡನ್ನು ತೀರಿಸಿಕೊಳ್ಳಲು ಬಂದವರು. ಇಲ್ಲವೇ ಹೆದರಿ, ಜೀವ ಉಳಿಸಿಕೊಳ್ಳಲು ಬಂದವರು.

ಅರ್ಜುನನು ಅಸ್ತ್ರಪರೀಕ್ಷೆಯಲ್ಲಿ ಪಕ್ಷಿಯ ಕಣ್ಣಿಗೆ ಗುರಿ ಹಿಡಿದು ದ್ರೋಣರ ಪ್ರಿಯ ಶಿಷ್ಯನಾದ. ಗುರು ಅನುಗ್ರಹವನ್ನು ಪಡೆದ. ಸ್ವಯಂವರದಲ್ಲಿ ಮತ್ಸ್ಯುಂತ್ರವನ್ನು ಭೇದಿಸಿ ದ್ರೌಪದಿಯನ್ನು ಗೆದ್ದ. ಖಾಂಡವವನದಲ್ಲಿ ಅಗ್ನಿಗೆ ಸಹಾಯ ಮಾಡಿ ಗಾಂಡೀವ ಧನುಸ್ಸು, ಅಕ್ಷಯ ತೂಣೀರ, ಬಿಳಿಯ ಕುದುರೆಯನ್ನು ಹೊಂದಿದ ದಿವ್ಯರಥವನ್ನು ಪಡೆದ. ರಾಜಸೂಯ ಯಾಗಕ್ಕಾಗಿ ಉತ್ತರ ದಿಕ್ಕನ್ನೇ ಜಯಿಸಿದ. ಈಶ್ವರನಿತ್ತ ದಿವ್ಯದೃಷ್ಟಿಯಿಂದ ಶಿವನನ್ನು ಕಂಡ. ಪಾಶುಪತಾಸ್ತ್ರ, ಬ್ರಹ್ಮಶಿರ ಪಡೆದ. ಯಮನಿಂದ ಯಮದಂಡ, ವರುಣನಿಂದ ವರುಣಪಾಶಾಸ್ತ್ರ, ಕುಬೇರನಿಂದ ಅಂತರ್ಧಾನಾಸ್ತ್ರ ಪಡೆದ. ದೇವಲೋಕದಲ್ಲಿ ಐದು ವರ್ಷವಿದ್ದು ನೃತ್ಯ-ಗೀತ-ವಾದ್ಯ-ಸಂಗೀತ ಮತ್ತು ಅಸ್ತ್ರಗಳ ರಹಸ್ಯ ಶಿಕ್ಷಣವನ್ನು ಪಡೆದ. ಅಪ್ಸರೆಯರ ನೃತ್ಯವೈಭವವನ್ನು ಕಂಡ. ಅವರಲ್ಲಿ ಊರ್ವಶಿಯೂ ಇದ್ದಳು. ಆಕೆ ಚಂದ್ರವಂಶದ ಮೂಲ ಮಹಾಮಾತೆಯಾಗಿದ್ದಳು. ಅರ್ಜುನ ಮಾತೃಭಕ್ತಿಯಿಂದ ಅವಳನ್ನು ನೋಡಿದನು. ಸ್ವೇಚ್ಛೆಯಿಂದ ಬಂದ ಅವಳನ್ನು ಶಚಿಗೂ-ಕುಂತಿಗೂ ಹೋಲಿಸಿದ. ಇದರಿಂದ ಕುಪಿತಳಾದ ಊರ್ವಶಿಯು ನೀನು ಸ್ತ್ರೀಯರ ಮಧ್ಯೆ ನಟವೃತ್ತಿಯಿಂದ ನಪುಂಸಕನಾಗಿ ಕಾಲ ಕಳೆ ಎಂದು ಶಪಿಸಿದಳು. ಅರ್ಜುನನಿಗೆ ಅದು ಅಜ್ಞಾತವಾಸದಲ್ಲಿ ಪ್ರಯೋಜನವಾಯಿತು.

ಯುದ್ಧದ ಆರಂಭದಲ್ಲಿ ಅರ್ಜುನನಿಗೆ ಬಂದುದು ವಿಷಾದ. ಯುದ್ಧಕ್ಕಾಗಿಯೇ ಸಂಗ್ರಹಿಸಿದ ಶಸ್ತ್ರಾಸ್ತ್ರಗಳು, ಸಭೆಯಲ್ಲಿ ಆದ ಅವಮಾನ, ಅರಣ್ಯದಲ್ಲಿ ಪಟ್ಟಪಾಡು ಯಾವುದೂ ಅರ್ಜುನನ ಜ್ಞಾಪಕಕ್ಕೆ ಬರಲೇ ಇಲ್ಲ. ‘ಎರಡು ಸೇನೆಗಳ ಮಧ್ಯದಲ್ಲಿ ರಥ ನಿಲ್ಲಿಸು. ದುರ್ಬುದ್ಧಿಯಿಂದ ಯುದ್ಧ ಮಾಡಲು ಬಂದವರು ಯಾರೆಂದು ನಿರೀಕ್ಷಿಸುತ್ತೇನೆ’ ಎನ್ನುವನು. ಜ್ಞಾನ-ಕರ್ವಂಗಗಳ ಸರಿಯಾದ ತಿಳಿವಳಿಕೆ ಇರಬೇಕು. ಜ್ಞಾನವೇ ಪರಮೋಚ್ಚ ಸಿದ್ಧಿಯಾದರೂ, ಪರಿಪೂರ್ಣವಾಗಿ ಕರ್ವಂಗವನ್ನು ಆಚರಿಸಬೇಕು.