ನ್ಯೂಸ್

ಪಿಪಿಇ ಕಿಟ್​ ಧರಿಸಿ ಊಟ ಬಡಿಸಿದ ಅಡುಗೆಯವರು, ಆಂಧ್ರದಲ್ಲಿ ವಿಶಿಷ್ಟ ಪ್ರಯೋಗ

ಅಮರಾವತಿ: ಆಂಧ್ರಪ್ರದೇಶದ ಮುದ್ದಿನೆಪಲ್ಲಿ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಅಡುಗೆಯವರು ಪಿಪಿಇ ಕಿಟ್​ ಧರಿಸಿ ಊಟ ಬಡಿಸಿದ ವಿಡಿಯೋ ಭಾರಿ ವೈರಲ್​ ಆಗಿದೆ.

ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ಅನುಮತಿ ಪಡೆದ ವಧು ಮತ್ತು ವರನ ಮನೆಯವರು ಜು.22ರಂದು ವಿವಾಹ ಸಮಾರಂಭ ಏರ್ಪಡಿಸಿದ್ದರು. ಸೋಂಕು ಹರಡದಂತೆ ಸಂಪೂರ್ಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು. ಅಲ್ಲದೆ, ಕೋವಿಡ್​-19ರ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಮದುವೆಯಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಊಟೋಪಚಾರ ಮಾಡಬೇಕು ಎಂದು ಕೃಷ್ಣ ಜಿಲ್ಲೆಯ ಗುಡಿವಾಡಾದ ಕೋಟಿ ಕೇಟರರ್ಸ್​ಗೆ ಸೂಚಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕೋಟಿ ಕೇಟರರ್ಸ್​ ಅಡುಗೆ ಕೆಲಸಕ್ಕೆ ಬಂದಿದ್ದ ಎಲ್ಲ ನೌಕರರ ದೈಹಿಕ ತಾಪಮಾನ ಪರೀಕ್ಷಿಸಿದ್ದಲ್ಲದೆ, ಸ್ಯಾನಿಟೈಸರ್​ಗಳನ್ನು ಬಳಸಿದ್ದರು. ಊಟ ಬಡಿಸಲೆಂದೇ 12 ಜನರಿಗೆ ಪಿಪಿಇ ಕಿಟ್​ ಕೊಟ್ಟಿದ್ದರು. ಇದನ್ನು ಧರಿಸಿದ ಅವರು ಅತಿಥಿಗಳೆಲ್ಲರಿಗೂ ಊಟ ಬಡಿಸಿದ್ದು ವಿಶೇಷವಾಗಿತ್ತು. ಊಟದ ಸರತಿ ಸಾಲಿನಲ್ಲಿ ಕೂಡ ದೈಹಿಕ ಅಂತರ ಇರುವಂತೆ ಕೇಟರರ್ಸ್​ ಟೇಬಲ್​ಗಳನ್ನು ಜೋಡಿಸಿದ್ದು ಇದರ ಮತ್ತೊಂದು ವಿಶೇಷವಾಗಿತ್ತು.

ಊಟ ಬಡಿಸುವುದು ಮುಗಿದ ನಂತರದಲ್ಲಿ ಅಡುಗೆಯವರು ಧರಿಸಿದ್ದ ಪಿಪಿಇ ಕಿಟ್​ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಯಿತು. ಅಲ್ಲಿಯೂ ಕೂಡ ಸುರಕ್ಷತೆಯ ಕಾಳಜಿ ತೋರಲಾಯಿತು ಎಂದು ಮದುವೆ ಕಾರ್ಯಕ್ರಮದ ಆಯೋಜಕರು ಮಾಹಿತಿ ನೀಡಿದ್ದಾರೆ.