ನ್ಯೂಸ್

72 ಜನರಿಗೆ ಪೌತಿಖಾತೆ ದಾಖಲೆ ವಿತರಣೆ

ಎ. ಆರ್. ರಘುರಾಮ

ಹುಣಸೂರು : ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಪೌತಿಖಾತೆ ಆಂದೋಲನದಡಿ 72 ಅರ್ಜಿದಾರರಿಗೆ ದಾಖಲೆಗಳನ್ನು ಒದಗಿಸಿ ಪೌತಿಖಾತೆ ಮಾಡಿಕೊಡಲಾಗಿದೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಕಸಬಾ ಹೋಬಳಿ ವ್ಯಾಪ್ತಿಯ ಪೌತಿಖಾತೆ ಆಂದೋಲನ ಕಾರ್ಯಕ್ರಮದಲ್ಲಿ ಅರ್ಜಿದಾರರಿಗೆ ದಾಖಲೆಗಳನ್ನು ಹಸ್ತಾಂತರಿಸಿ ಮಾತನಾಡಿದರು. ಹಲವು ದಶಕಗಳಿಂದ ಪೌತಿಖಾತೆಯಾಗದೇ ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಗದ, ಆಸ್ತಿಯ ಹಕ್ಕನ್ನು ವಂಶಸ್ಥರಿಗೆ ಹಸ್ತಾಂತರಿಸುವಲ್ಲಿ ಆಗಿರುವ ಎಲ್ಲ ಅಡೆತಡೆಗಳನ್ನು ನೀಗಿಸಲು ಸರ್ಕಾರದ ಸೂಚನೆಯಂತೆ ಹೋಬಳಿ ಮಟ್ಟದಲ್ಲಿ ಪೌತಿಖಾತೆ ಆಂದೋಲನ ಆರಂಭಿಸಲಾಗಿದೆ. ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 385 ಅರ್ಜಿಗಳು ವಿಲೇವಾರಿಯಾಗಿದ್ದು, ಈಪೈಕಿ 72 ಅರ್ಜಿಗಳಿಗೆ ದಾಖಲೆಗಳನ್ನು ನೀಡಲಾಗಿದೆ, ಯಾವುದೇ ತಂಟೆತರಕಾರು ಹೊಂದಿರದ ಅರ್ಜಿಗಳನ್ನು ಶೀಘ್ರ ವಿಲೇ ಮಾಡಲು ಅಧೀನ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಈಗಲೂ ಅರ್ಜಿಸ ಸಲ್ಲಿಸಲು ಅವಕಾಶವಿದ್ದು, ಪೌತಿಖಾತೆ ಆಂದೋಲನದ ಸದುಪಯೋಗಪಡಿಸಿಕೊಳ್ಳಲು ಕೋರಿದರು. ರಾಜಸ್ವ ನಿರೀಕ್ಷಣಾಧಿಕಾರಿ ನಂದಕುಮಾರ್, ಶಿರಸ್ತೇದಾರ್ ಕಿರಣ್‌ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಶಿವಕುಮಾರ್, ಗುರುಪ್ರಸಾದ್, ನಾಗೇಶ್, ವಿಶಾಲ್ ಚೌಹಾಣ್, ಕೀರ್ತಿ, ಗಿರಿಗೌಡ ಇತರರು ಹಾಜರಿದ್ದರು.