ಬೇಸಿಗೆಯ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ರಾಜ್ಯದ ಶೇಕಡ 75ರಷ್ಟು ಪ್ರದೇಶಗಳಲ್ಲಿ ಸರಾಸರಿ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ನಿಂದ 40 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಮಾರ್ಚ್ನಲ್ಲಿಯೇ ಈ ಸ್ಥಿತಿ ಇದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಲಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಉಷ್ಣಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಬೇಸಿಗೆಯ ಕಾರಣ ಸ್ವಾಭಾವಿಕವಾಗಿ ಎಸಿ, ಫ್ಯಾನ್ಗಳ ಬಳಕೆಯಿಂದ ವಿದ್ಯುತ್ ಬೇಡಿಕೆ ಕೂಡ ಏರಿಕೆಯಾಗಿದೆ. ಕಳೆದ ಕೆಲ ವರ್ಷಗಳ ಬೇಸಿಗೆ ಅವಧಿಯ ವಿದ್ಯುತ್ ಬೇಡಿಕೆಯನ್ನು ಅವಲೋಕಿಸಿದರೆ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚುತ್ತಲೇ ಹೋಗಿದೆ.
2022ರಲ್ಲಿ 14,766 ಮೆಗಾವಾಟ್, 2023ರಲ್ಲಿ 15,100 ಮೆಗಾವಾಟ್, 2024ರಲ್ಲಿ 17000 ಮೆಗಾವಾಟ್ ವಿದ್ಯುತ್ ಬಳಕೆಯಾಗಿದೆ. 2025ರ ಮಾರ್ಚ್ಗೆ ವಿದ್ಯುತ್ ಬೇಡಿಕೆಯ ಪ್ರಮಾಣ 18,200 ಮೆಗಾವಾಟ್ ಇದ್ದರೂ, ಲಭ್ಯತೆ ಮಾತ್ರ 16,668 ಮೆಗಾವಾಟ್ನಷ್ಟಿದ್ದು, 1,532 ಮೆಗಾವಾಟ್ ಕೊರತೆ ಕಾಡುತ್ತಿದೆ. ಏಪ್ರಿಲ್ನಲ್ಲಿ ಬೇಡಿಕೆ 19 ಸಾವಿರ ಮೆಗಾವಾಟ್ಗೆ ಹೆಚ್ಚುವ ಸಾಧ್ಯತೆ ಇದೆ.
ಬೇಸಿಗೆ ಆರಂಭದಲ್ಲೇ ಅನಿಯಮಿತ ಲೋಡ್ ಶೆಡ್ಡಿಂಗ್ ವಿಧಿಸಲಾಗುತ್ತಿದ್ದು, ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದರಲ್ಲೂ, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಜನರನ್ನು ಕಂಗೆಡಿಸಿದೆ. ಅಧಿಕಾರಿಗಳ ಜತೆ ಕಳೆದ ತಿಂಗಳು ಸಮಾಲೋಚನೆ ಸಭೆ ನಡೆಸಿದ್ದ ಇಂಧನ ಸಚಿವರು, ‘ರಾಜ್ಯದಲ್ಲಿ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಲಭ್ಯತೆ ಇದೆ. ಕೊರತೆಯ ಪ್ರಶ್ನೆ ಇಲ್ಲ.
ಹಾಗಾಗಿ, ಲೋಡ್ ಶೆಡ್ಡಿಂಗ್ ವಿಧಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಈಗಿನ ಪರಿಸ್ಥಿತಿ ಅದಕ್ಕೆ ತದ್ವಿರುದ್ಧವಾಗಿದೆ. ಹಾಗಿದ್ದರೆ, ಅಧಿಕಾರಿಗಳು ಸರಿಯಾದ ತಯಾರಿ ಮಾಡಿಕೊಳ್ಳಲಿಲ್ಲವೆ ಅಥವಾ ಸರ್ಕಾರಕ್ಕೆ ಅರೆಬರೆ ಮಾಹಿತಿ ನೀಡಿದರೆ ಎಂಬ ಅನುಮಾನ ಮೂಡುತ್ತದೆ. ಲೋಡ್ ಶೆಡ್ಡಿಂಗ್ ಸಮಸ್ಯೆ ದೈನಂದಿನ ಚಟುವಟಿಕೆಗಳ ಮೇಲೆ ಮಾತ್ರವಲ್ಲದೆ ಕೃಷಿ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಅಲ್ಲದೆ, ಪೂರ್ವ ಸೂಚನೆ ನೀಡದೆ ಇದ್ದಕ್ಕಿದ್ದಂತೆ ವಿದ್ಯುತ್ ಸಂಪರ್ಕ ಹಲವು ಗಂಟೆಗಳ ಕಾಲ ಸ್ಥಗಿತಗೊಳಿಸಿದರೆ ಜನರ ಗತಿ ಏನು? ವಿದ್ಯುತ್ ಸಮಸ್ಯೆ ಮತ್ತಷ್ಟು ವಿಕೋಪಕ್ಕೆ ಹೋಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಕೊರತೆಗೆ ಕಾರಣವೇನು? ಅನಿಯಮಿತ ಲೋಡ್ ಶೆಡ್ಡಿಂಗ್ ಏಕೆ ವಿಧಿಸಲಾಗುತ್ತಿದೆ? ಎಂಬುದನ್ನು ಅವಲೋಕಿಸಿ, ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು.