ನ್ಯೂಸ್

‘ಆಪರೇಷನ್ ಸಿಂಧೂರ’ ಮೇಕ್ ಇನ್ ಇಂಡಿಯಾದ ಶಕ್ತಿ; ಪ್ರಧಾನಿ ಮೋದಿ| PM Modi

PM Modi: ಆಪರೇಷನ್ ಸಿಂಧೂರ ಮೇಕ್ ಇನ್ ಇಂಡಿಯಾದ ಶಕ್ತಿ. ಆಪರೇಷನ್ ಸಿಂಧೂರ ನಡೆಸಿ ಭಾರತ ತನ್ನ ವಿಶ್ವರೂಪ ತೋರಿಸಿದೆ. ಭಾರತದ ಗಡಿಯಾಚೆಗಿನ ಉಗ್ರರ ತಾಣಗಳನ್ನು ನಾಶ ಮಾಡಿದ್ದೇವೆ ಎಂದು ಇಂದು(ಆಗಸ್ಟ್ 10) ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಹೇಳಿದರು.

ನಮ್ಮ ಮೆಟ್ರೋದ ಯಲ್ಲೋ ಮಾರ್ಗ ಉದ್ಘಾಟಿನೆ ಮತ್ತು 3ನೇ ಹಂತದ ಮೆಟ್ರೋಗೆ ಅಡಿಗಲ್ಲು ಹಾಕಿ ಮಾತನಾಡಿದ ಪ್ರಧಾನಿ ಮೋದಿ, ಆಪರೇಷನ್ ಸಿಂಧೂರ ಬಳಿಕ ಮೊದಲ ಬಾರಿ ಬೆಂಗಳೂರಿಗೆ ಬಂದಿದ್ದೇನೆ, ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಬೇರೆ ಬೇರೆ ಅಲ್ಲ ಎಂದು ಹೇಳಿದರು.

ನವ ಭಾರತದ ಸಂಕೇತವಾಗಿ ಬೆಂಗಳೂರು ಹೊರಹೊಮ್ಮುತ್ತಿದೆ. ಜಾಗತಿಕ ಐಟಿ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ನಗರ ಬೆಂಗಳೂರು. ಬೆಂಗಳೂರಿನ ಯಶೋಗಾಥೆಯ ಹಿಂದೆ ಏನಾದರೂ ಇದ್ದರೆ ಅದು ಇಲ್ಲಿನ ಜನರ ಕಠಿಣ ಪರಿಶ್ರಮ ಮತ್ತು ಪ್ರತಿಭೆ. ಜಾಗತಿಕ ನಾಯಕತ್ವದತ್ತ ಭಾರತ ಮುನ್ನಡೆಯುತ್ತಿದೆ. ಬೆಂಗಳೂರಿನಂಥ ನಗರಗಳನ್ನು ಭವಿಷ್ಯಕ್ಕಾಗಿ ರೂಪಿಸಬೇಕು ಎಂದು ಪ್ರತಿಪಾದಿಸಿದರು.

ಭಾರತ ಬಹುಬೇಗನೇ 4ನೇ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತ ಮುನ್ನೆಡೆದಂತೆ ಬಡವರ ಬದುಕು ಹಸನಾಗಲಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಭಾರತ ಇಂದು ಮುನ್ನಡೆ ಸಾಧಿಸುತ್ತಿದೆ. ವಿಶ್ವದ 3ನೇ ಅತಿದೊಡ್ಡ ಮೆಟ್ರೋ ಹೊಂದಿದ 3ನೇ ರಾಷ್ಟ್ರ ಭಾರತ. ಇಂದು ಮೆಟ್ರೋ ಹಳದಿ ಮಾರ್ಗವನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.

2014ರಲ್ಲಿ ಮೆಟ್ರೋ ಕೇವಲ 5 ನಗರಗಳಿಗೆ ಸೀಮಿತವಾಗಿತ್ತು. ಈಗ 24 ನಗರಗಳಲ್ಲಿ 1000 ಕಿಮೀ ಗಿಂತ ಹೆಚ್ಚಿನ ಮಾರ್ಗವಿದೆ. ಮೊದಲು ಸುಮಾರು 20,000 ಕಿ.ಮೀ. ರೈಲು ಮಾರ್ಗವನ್ನು ವಿದ್ಯುದ್ದೀಕರಿಸಲಾಗಿತ್ತು. ಕಳೆದ 11 ವರ್ಷಗಳಲ್ಲಿ ನಾವು 40,000 ಕಿ.ಮೀ.ಗಿಂತ ಹೆಚ್ಚು ರೈಲು ಮಾರ್ಗವನ್ನು ವಿದ್ಯುದ್ದೀಕರಿಸಿದ್ದೇವೆ. ಹಿಂದೆ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ಈಗ ಅವುಗಳ ಸಂಖ್ಯೆ 160 ಕ್ಕಿಂತ ಹೆಚ್ಚಾಗಿದೆ. ಜಲಮಾರ್ಗಗಳ ಅಂಕಿ ಅಂಶಗಳು ಸಹ ಅಷ್ಟೇ ಏರಿಕೆಯಾಗಿದೆ. ಹಿಂದೆ ಕೇವಲ 3 ರಾಷ್ಟ್ರೀಯ ಜಲಮಾರ್ಗಗಳಿದ್ದವು, ಈಗ ಆ ಸಂಖ್ಯೆ 30 ಕ್ಕೆ ಏರಿದೆ ಎಂದು ತಿಳಿಸಿದರು.

ಡಿಜಿಟಲ್ ಇಂಡಿಯಾದ ಪ್ರಯಾಣದ ಕನಸು ಇಂದು ನನಸಾಗಿದೆ. ಹಳ್ಳಿಹಳ್ಳಿಯಲ್ಲೂ ಡಿಜಿಟಲ್ ತಂತ್ರಜ್ಞಾನ ಬಳಕೆಯಾಗುತ್ತಿದೆ. ವಿಶ್ವದ ಶೇ. 50ಕ್ಕಿಂತ ಹೆಚ್ಚು ನೈಜ-ಸಮಯದ ವಹಿವಾಟುಗಳು ಭಾರತದಲ್ಲಿ ಯುಪಿಐ ಮೂಲಕ ನಡೆಯುತ್ತವೆ. ತಂತ್ರಜ್ಞಾನದ ಸಹಾಯದಿಂದ ಸರ್ಕಾರ ಮತ್ತು ನಾಗರಿಕರ ನಡುವಿನ ಅಂತರ ಕಡಿಮೆಯಾಗುತ್ತಿದೆ. ಡಿಜಿಟಲ್ ಕ್ರಾಂತಿಯ ಪ್ರಯೋಜನ ಸಮಾಜದ ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳಬೇಕು. ಈ ಪ್ರಯತ್ನದಲ್ಲಿ ಬೆಂಗಳೂರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ತಿಳಿಸಿದರು. (ಏಜೆನ್ಸೀಸ್)