ಸಾಗರ: ರೈತರು ಕೃಷಿ ಪಂಪ್‌ಸೆಟ್‌ಗಳಿಗೆ ಪಡೆದಿರುವ ಅನಧಿಕೃತ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಎಂದು ಶಾಸಕ ಅವಿವೇಕದ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಲೇವಡಿ ಮಾಡಿದರು.
ಜಮೀನಿಗೆ ರೈತರು ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿದ್ದರೆ ಕಡಿತಗೊಳಿಸಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಹೇಳುವ ಮೂಲಕ ಗೋಪಾಲಕೃಷ್ಣ ಬೇಳೂರು ರೈತರ ಬಗ್ಗೆ ತಮಗಿರುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಹುತೇಕ ಕಡೆ ಕೃಷಿ ಪಂಪ್‌ಸೆಟ್‌ಗಳಿಗೆ ರೈತರು ಅನಧಿಕೃತ ಸಂಪರ್ಕವನ್ನೇ ಪಡೆದಿದ್ದಾರೆ. ಬೇಸಿಗೆಯಲ್ಲಿ ಇರುವ ವಿದ್ಯುತ್ ಹೊಂದಿಸಿಕೊಡುವುದು, ಹೆಚ್ಚುವರಿ ವಿದ್ಯುತ್ ಖರೀದಿಸಿ ಬೆಳೆಗಳನ್ನು ಉಳಿಸಲು ಪ್ರಯತ್ನಿಸಬೇಕೇ ಹೊರತು ಸಂಪರ್ಕ ಕಡಿತಗೊಳಿಸಿ ಹೇಳುವುದು ಎಷ್ಟು ಸರಿ? ಒಂದೊಮ್ಮೆ ಶಾಸಕರ ಆದೇಶ ಪಾಲನೆ ಮಾಡಿ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ರೈತರು ನನ್ನ ಗಮನಕ್ಕೆ ತರಬೇಕು. ರೈತರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.
ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಹೆಚ್ಚುವರಿಯಾಗಿ 28 ಕೋಟಿ ರೂ. ತಂದಿದ್ದೇನೆ ಎಂದು ಶಾಸಕರು ಹೇಳಿರುವುದು ಶುದ್ಧ ಸುಳ್ಳು. ಒಂದೊಮ್ಮೆ ಅನುದಾನ ತಂದಿದ್ದರೆ ಅದನ್ನು ದಾಖಲೆ ಸಹಿತ ತಿಳಿಸಲಿ. ನಾನು ಶಾಸಕನಾಗಿದ್ದಾಗ ಮಾರ್ಕೆಟ್ ರಸ್ತೆಗೆ 28 ಕೋಟಿ ರೂ. ಅನುದಾನ ತಂದಿದ್ದು, ಅದರಲ್ಲಿ ಸುಮಾರು 19 ಕೋಟಿ ರೂ. ಭೂಸ್ವಾಧೀನ ಪ್ರಕ್ರಿಯೆಗೆ ವ್ಯಯವಾಗಿದೆ. ಉಳಿದ ಹಣ ಉಪವಿಭಾಗಾಧಿಕಾರಿ ಖಾತೆಯಲ್ಲಿದೆ. ಹಣ ಇದ್ದೂ ಖರ್ಚು ಮಾಡಿಲ್ಲ ಎಂದು ಗೊತ್ತಾದರೆ ಸರ್ಕಾರ ಅದನ್ನು ವಾಪಸ್ ತರಿಸಿಕೊಳ್ಳುತ್ತದೆ. ಏಕೆಂದರೆ ಸರ್ಕಾರ ದಿವಾಳಿಯಾಗಿದೆ. ಆದರೆ ನಾನೇ ನಮ್ಮೂರಿನ ಹಿತದೃಷ್ಟಿಯಿಂದ ಹಣ ಇರುವ ಬಗ್ಗೆ ಪ್ರಸ್ತಾಪಿಸಿಲ್ಲ. ಅನುದಾನ ತಂದು ಭಾರಿ ಕಾಮಗಾರಿ ನಡೆಸುತ್ತಿದ್ದೇನೆ ಎಂದು ಪೋಸ್ ಕೊಡುವ ಕೆಲಸವನ್ನು ಶಾಸಕರು ಮಾಡಿತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಉಚ್ಚಾಟನೆ ಮಾಡಿರುವುದನ್ನು ಸಂಭ್ರಮಿಸಬಾರದು ಎಂದು ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಪಕ್ಷದಲ್ಲಿ ಕೆಲವು ಘಟನೆಗಳು ನಡೆಯುತ್ತದೆ. ಎಲ್ಲರೂ ಒಟ್ಟಾಗಿ ಪಕ್ಷ ಕಟ್ಟಲು ಶ್ರಮಿಸಬೇಕು ಎಂದರು.
ಪ್ರಮುಖರಾದ ಟಿ.ಡಿ.ಮೇಘರಾಜ್, ದೇವೇಂದ್ರಪ್ಪ, ರತ್ನಾಕರ ಹೊನಗೋಡು, ಮಲ್ಲಿಕಾರ್ಜುನ ಹಕ್ರೆ, ರಮೇಶ್, ಗಿರೀಶ ಗೌಡ, ಬೈರಪ್ಪ, ಹರೀಶ್ ಮೂಡಳ್ಳಿ, ಮುರಳಿ, ನಾರಾಯಣಪ್ಪ, ಗೋಪಾಲ, ಸುರೇಶ್ ಹಾಜರಿದ್ದರು.