ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಮಾತನಾಡಿದರು. ತುಷಾರ್, ಡಿ.ಮೋಹನ್ ಕುಮಾರ್, ಮಂಜಣ್ಣ, ಎಸ್.ಆರ್.ನಾಗೇಶ್, ಎನ್.ಎಂ.ಸುನೀಲ್‌ಕುಮಾರ್, ತ್ರಿವೇಣಿ ಸುದ್ದಿಗೋಷ್ಠಿಯಲ್ಲಿದ್ದರು. 
ನ್ಯೂಸ್

23ಕ್ಕೆ ಪೌರ ಕಾರ್ಮಿಕರ ದಿನಾಚರಣೆ: ಎನ್.ಗೋವಿಂದ

ಶಿವಮೊಗ್ಗ: ನಗರದ ಅಂಬೇಡ್ಕರ್ ಭವನದಲ್ಲಿ ಸೆ. 23ರಂದು ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಪಾಲಿಕೆ ನೌಕರರ ಸಂಘದಿಂದ ಪೌರ ಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಹೇಳಿದರು.

ಸೆ. 23ರ ಬೆಳಗ್ಗೆ 10ಕ್ಕೆ ಶ್ರೀ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಅಂಬೇಡ್ಕರ್ ಭವನದವರೆಗೆ ಮೆರವಣಿಗೆಯಲ್ಲಿ ನೂರಾರು ಪೌರ ಕಾರ್ಮಿಕರು, ಡಿ ಗ್ರೂಪ್ ನೌಕರರು, ಲೋಡರ್ಸ್‌, ಚಾಲಕರು ಪಾಲ್ಗೊಳ್ಳುವರು. ಬೆಳಗ್ಗೆ 11.30ಕ್ಕೆ ಸಚಿವ ಮಧು ಬಂಗಾರಪ್ಪ ಸಮಾರಂಭ ಉದ್ಘಾಟಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್, ಲೋಕಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಎಂಎಲ್‌ಸಿಗಳಾದ ಎಸ್.ಎಲ್.ಭೋಜೇಗೌಡ, ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಬಲ್ಕಿಷ್ ಬಾನು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಉಪಸ್ಥಿತರಿರುವರು ಎಂದರು.
ಪೌರ ಕಾರ್ಮಿಕರ ದಿನಾಚರಣೆಗೂ ಮುನ್ನ ಸೆ. 19ರಂದು ಡಿಎಆರ್ ಮೈದಾನದಲ್ಲಿ ಪಾಲಿಕೆ ನೌಕರರಿಗೆ ಅಥ್ಲೆಟಿಕ್ ಕ್ರೀಡಾಕೂಟ, 20ರಂದು ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು.
ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವವಾದದ್ದು, ತಮ್ಮ ಆರೋಗ್ಯ ಬದಿಯಿಟ್ಟು ಸಮಾಜದ ಆರೋಗ್ಯಕ್ಕೆ ಸದಾ ಕಂಕಣ ಬದ್ಧರಾಗಿರುತ್ತಾರೆ. ಹಲವು ಕಷ್ಟ ಸಹಿಸಿಕೊಳ್ಳುತ್ತಾರೆ. ಇಂತಹ ಪೌರ ಕಾರ್ಮಿಕರ ಸನ್ಮಾನಿಸುವುದು ನಮ್ಮ ಕರ್ತವ್ಯ. ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಕೆಲಸ ಮಾಡಿದ 20 ಪೌರ ಕಾರ್ಮಿಕರನ್ನು ಗೌರವಿಸಲಾಗುವುದು ಎಂದರು.
ಉಪ ಆಯುಕ್ತ ತುಷಾರ್, ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಮೋಹನ್ ಕುಮಾರ್, ಖಜಾಂಚಿ ಮಂಜಣ್ಣ, ಸಂಘಟನಾ ಕಾರ್ಯದರ್ಶಿ ಎಸ್.ಆರ್.ನಾಗೇಶ್, ನಿರ್ದೇಶಕರಾದ ಎನ್.ಎಂ.ಸುನೀಲ್‌ಕುಮಾರ್, ತ್ರಿವೇಣಿ ಸುದ್ದಿಗೋಷ್ಠಿಯಲ್ಲಿದ್ದರು.

ಮದುವೆಗೆ ಸಹಾಯಧನ
ಪೌರ ಕಾರ್ಮಿಕರ ಹೆಣ್ಣು ಮಕ್ಕಳ ಮದುವೆಗೆ ರಾಜ್ಯ ಸರ್ಕಾರ 50 ಸಾವಿರ ರೂ. ಹಾಗೂ ಸಂಘ 10 ಸಾವಿರ ರೂ. ನೀಡುತ್ತಿದೆ. ಮೂರು ವರ್ಷದಿಂದ ಸರ್ಕಾರ 63 ಹೆಣ್ಣು ಮಕ್ಕಳಿಗೆ ಸೌಲಭ್ಯ ಕಲ್ಪಿಸಿದ್ದು, ಒಂದು ವರ್ಷದಿಂದ 32 ಪೌರ ಕಾರ್ಮಿಕರ ಮಕ್ಕಳಿಗೆ ತಲಾ 10 ಸಾವಿರ ರೂ. ಅನ್ನು ಸಂಘ ನೀಡಿದೆ ಎಂದು ಗೋವಿಂದ ಹೇಳಿದರು. ಪಾಲಿಕೆಯಲ್ಲಿ ಜನಸಂಖ್ಯೆಗೆ ತಕ್ಕಂತೆ ಪೌರ ಕಾರ್ಮಿಕರಿಲ್ಲ. ಶೇ. 25ರಷ್ಟು ಪೌರ ಕಾರ್ಮಿಕರ ಹುದ್ದೆಗಳು ಖಾಲಿ ಇವೆ. ಹಾಲಿ 750 ಕಾರ್ಮಿಕರಿದ್ದಾರೆ. ಹೊರಗುತ್ತಿಗೆ ಕಾರ್ಮಿಕರು, ಕಚೇರಿ ಸಿಬ್ಬಂದಿ ಸೇರಿ 1,050 ನೌಕರರಿದ್ದಾರೆ. ಪೌರ ಕಾರ್ಮಿಕರ ನೇಮಕಕ್ಕೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.