ಕೋಲಾರದ ತಾಲೂಕು ಕಚೇರಿ ಎದುರು ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.  
ನ್ಯೂಸ್

ಕುಕ್ಕುಟೋದ್ಯಮವನ್ನೂ ಕೃಷಿಯೆಂದು ಪರಿಗಣಿಸಿ

ಕೋಲಾರ: ಕೋಳಿ ಸಾಕಣೆಯನ್ನು ಕೃಷಿಯೆಂದು ಪರಿಗಣಿಸಿ, ಕುಕ್ಕುಟೋದ್ಯಮದ ಸಮರ್ಪಕ ನಿರ್ವಹಣೆಗೆ ಭೂ ಕಂದಾಯ ಕಾಯ್ದೆ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿ, ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀಧರ್​ ರೆಡ್ಡಿ ಮಾತನಾಡಿ, ಕೋಳಿ ಸಾಕಣೆದಾರರ ಬೇಡಿಕೆಗಳ ಸಂಬಂಧ ಪಶು ಸಂಗೋಪನಾ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇವೆ, ಆದರೂ ಯಾವುದೇ ರೀತಿಯ ಕ್ರಮವಹಿಸಿಲ್ಲ. ಕೂಡಲೇ ರಾಜ್ಯ ಸರ್ಕಾರವು ಕುಕ್ಕುಟೋದ್ಯಮದ ಬಗ್ಗೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ವಿವಿಧ ಹಂತದಲ್ಲಿ ಸುಮಾರು 3 ಕೋಟಿ ಮಂದಿಗೆ ಉದ್ಯೋಗ ಅವಕಾಶ ನೀಡಲಾಗಿದೆ. ಕಂಪನಿಗಳ ಪರ ನಿಯಮಗಳನ್ನು ಕೈಬಿಟ್ಟು ಕೋಳಿ ಸಾಕಣೆದಾರರನ್ನು ಉಳಿಸಿ ಪ್ರೋತ್ಸಾಹಿಸಿ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು ಎಂದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಹಿಡಿದು ಹಿಂದೆ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಕುಮಾರಸ್ವಾಮಿ ಸರ್ಕಾರದವರೆಗೂ ಹಲವು ಬಾರಿ ಮನವಿ ಮಾಡಿದರೂ ಕಾನೂನು ರೂಪಿಸಿಲ್ಲ. ಕೋಳಿ ಸಾಕಾಣಿಕೆದಾರರು ಮತ್ತು ಕಂಪನಿಗಳ ನೇತೃತ್ವದಲ್ಲಿ ಸಭೆ ನಡೆದರು ಮರಿ ಸರಬರಾಜು, ಕನಿಷ್ಠ ಸಾಕಾಣಿಕೆ ದರ, ಪಾವತಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಕೋಳಿ ಸಾಕಾಣಿಕೆದಾರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಅಧ್ಯಕ್ಷ ಜೆ.ಸಿ.ಮಂಜುನಾಥ್​, ತಾಲೂಕು ಅಧ್ಯಕ್ಷ ವೆಂಕಟೇಶಪ್ಪ, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಶಿವಪ್ಪ, ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಕೋಳಿ ಸಂಘದ ಪದಾಧಿಕಾರಿಗಳಾದ ಗಿರೀಶ್​ಗೌಡ, ಪಿ.ಶ್ರೀನಿವಾಸ್​, ನಟರಾಜ್​, ಕಿರಣ್​, ರಮೇಶ್​, ಅಂಬರೀಶ್​ ಇದ್ದರು.