ಬೆಂಗಳೂರು: ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಪರಿಗಣಿಸಬೇಕು, ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನವದಲ್ಲಿ ಅಖಿಲ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕೋಳಿ ಸಾಕಾಣಿಕೆಯೂ ರೈತರ ಪ್ರಧಾನ ಕಸುಬು ಆಗಿದೆ. ಹೈನೋದ್ಯಮ ವ್ಯಾಪ್ತಿಗೆ ಒಳಪಡಿಸಿಕೊಂಡು ಬರಲಾಗಿದ್ದು, ಕಾರಣಂತರ ಬ್ಯಾಂಕ್ ಅಧಿಕಾರಿಗಳು, ಕೆಲ ಸರ್ಕಾರಿ ಅಧಿಕಾರಿಗಳು ವಾಣಿಜ್ಯ ಉದ್ದಿಮೆ ವ್ಯಾಪ್ತಿಗೆ ಒಳಪಡಿಸಿದ್ದಾರೆ. ಇದರಿಂದ ಸಾಕಣೆದಾರರಿಗೆ ತೀವ್ರ ಹೊರೆಯಾಗಿದೆ ಎಂದು ಹೇಳಿದರು.
ವಿದ್ಯುತ್‌ಗೆ ವಾಣಿಜ್ಯ ಶುಲ್ಕ, ಔಷಧ, ಆಹಾರ ಬೆಲೆ ಏರಿಕೆಯಾಗಿದೆ. ಇದರ ಬೆಲೆ ನಿಗದಿಯನ್ನು ಕಂಪನಿಗಳೇ ನಿರ್ಧರಿಸುತ್ತಿವೆ. ಇದರಿಂದ ಬರುವ ಲಾಭದ ಮೊತ್ತ ಕಂಪನಿಗಳಿಗೆ ಪಾವತಿ ಮಾಡಲಾಗುತ್ತಿದೆ. ಬೆಲೆ ನಿಯಂತ್ರಣ ಮಾಡಲು ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಕನಿಷ್ಠ ಸಾಕಾಣಿಕೆ ವೆಚ್ಚವಾಗಿ ಪ್ರತಿ ಕೆ.ಜಿ.ಗೆ 10 ರೂ. ನಿಗದಿಪಡಿಸಲು ಸರ್ಕಾರ ಆದೇಶಿಸಿದೆ. ಆದರೆ ಇದನ್ನು ಕಂಪನಿಗಳು ಪಾಲನೆ ಮಾಡುತ್ತಿಲ್ಲ. ಈ ಕುರಿತು ಇಂಟಿಗ್ರೇಷನ್ ಕಂಪನಿಗಳಿಗೆ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ವಿಧಾನ ಪರಿಷತ್ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ ಮಾಡಿ ರೈತರ ಮನವಿಗೆ ಸ್ಪಂದಿಸಿ ಸದನದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಾಸಕ ರವಿಕುಮಾರ್, ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಮಾರಣ್ಣ, ಉಪಾಧ್ಯಕ್ಷ ಧನಂಜಯ್, ಮುಖಂಡರಾದ ಟಿ. ಯಶವಂತ, ವೆಂಕಟರೆಡ್ಡಿ, ಶ್ರೀಧರ್ ರೆಡ್ಡಿ, ರಾಜ್‌ಕುಮಾರ್, ನಿತಿನ್, ಸುಧಾಕರ್ ಮತ್ತಿತರರಿದ್ದರು.