ರಿಪ್ಪನ್‌ಪೇಟೆ: ಜೈನಧರ್ಮದ ಮುನಿ ಶ್ರೀ ಶಾಂತಿಸಾಗರ ಮಹಾರಾಜರ ಆಚಾರ್ಯ ಪದಾರೋಹಣ ಶತಮಾನೋತ್ಸವ ಅಂಗವಾಗಿ ಭಾರತೀಯ ಅಂಚೆ ಇಲಾಖೆಯು ಮುನಿಗಳ ಸ್ಮರಣಾರ್ಥ ಹೊರತರುತ್ತಿರುವ ಅಂಚೆ ಕಾರ್ಡ್ ಅನ್ನು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಮ್ಮುಖದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜೈನಧರ್ಮದ ಪುಣ್ಯ ಪುರುಷ, ರಾಷ್ಟ್ರಭಕ್ತ ಮುನಿ ಶ್ರೀ ಶಾಂತಿಸಾಗರ ಮಹಾರಾಜರು ಧಾರ್ಮಿಕ ಕಾರ್ಯದಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. ಅಂಚೆ ಇಲಾಖೆಯು ಇವರ ಸ್ಮರಣಾರ್ಥ ಅಂಚೆ ಕಾರ್ಡ್ ಹೊರ ತರುತ್ತಿರುವುದರಿಂದ ಜೈನಧರ್ಮ ಪರಂಪರೆ ಇನ್ನಷ್ಟು ಪಸರಿಸಲಿದೆ ಎಂದು ತಿಳಿಸಿದರು.
ಜೈನ ತತ್ವ, ಸಿದ್ಧಾಂತ, ಗ್ರಂಥಗಳ ಬಗ್ಗೆ ನಿಖರ ಅಭಿಪ್ರಾಯವನ್ನು ಮುಕ್ತವಾಗಿ ಪ್ರವಚನದ ಮೂಲಕ ಸಾದರಪಡಿಸುತ್ತಿದ್ದರು. ಮುನಿವರ್ಯರ ಆಚಾರ ವಿಚಾರ, ಸ್ವಾತಂತ್ರೃ, ಮೂಲ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಶ್ರೀ ಶಾಂತಿಸಾಗರ ಮಹಾರಾಜರು ಸ್ಪಷ್ಟ ಧೋರಣೆ ಹೊಂದಿದ್ದರು ಎಂದರು.
ಶಿವಮೊಗ್ಗ ಅಂಚೆ ಇಲಾಖೆ ಅಧೀಕ್ಷಕ ಜಿ.ಜಯರಾಮ್ ಶೆಟ್ಟಿ, ಧಾರವಾಡ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷ ಆರ್.ಟಿ.ತವನಪ್ಪನವರ್, ಶಿವಮೊಗ್ಗ ಅಂಚೆ ಇಲಾಖೆ ಉಪಾಧೀಕ್ಷಕ ಗಣೇಶ್, ಹುಬ್ಬಳ್ಳಿ ಮಹಾವೀರ ಕುಂದೂರ, ಸಂತೋಷಕುಮಾರ್ ಪಾಟೀಲ್, ಸುಭಾಷ್ ಹೊಸಮನಿ, ತವನಪ್ಪ ಶಿರಗುಪ್ಪಿ, ಹುಂಚ ಅಂಚೆ ಪಾಲಕ ಎಸ್.ಬಿ.ಡಾಕಪ್ಪ, ಸಂತೋಷ್ ಪಾಟೀಲ, ಅಶೋಕಕುಮಾರ್, ದೇವೇಂದ್ರ ಉಪಸ್ಥಿತರಿದ್ದರು.