ಶಿವಮೊಗ್ಗ: ಗಾಂಧೀಜಿ ಅವರು ಮಹಿಳಾ ಸ್ವಾತಂತ್ರ್ಯಕ್ಕೆ ಹೆಚ್ಚು ಒತ್ತು ನೀಡಿದ್ದರು. ಅವರ ಗ್ರಾಮಸ್ವರಾಜ್ಯ, ಮಹಿಳಾ ಸ್ವಾತಂತ್ರ್ಯದ ಕನಸು ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಮಹಿಳೆಯರು ಆತ್ಮವಿಶ್ವಾಸದ ಹೆಜ್ಜೆ ಇಡುವಲ್ಲಿ, ಅವರ ಹಲವು ಕನಸುಗಳಿಗೆ ಶಕ್ತಿ ತುಂಬುವಲ್ಲಿ ರಾಜ್ಯ ಸರ್ಕಾರ ಶಕ್ತಿ ಯೋಜನೆ ಅನುಷ್ಠಾನಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆಯಿಂದ ಆಯೋಜಿಸಿದ್ದ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಯಾವುದೇ ಯೋಜನೆಗಳಿಗೆ ದೊರೆಯದಷ್ಟು ಉತ್ತಮ ಪ್ರತಿಕ್ರಿಯೆ, ಸಕಾರಾತ್ಮಕ ಸ್ಪಂದನೆ ಶಕ್ತಿ ಯೋಜನೆಗೆ ಲಭಿಸಿದೆ. ದೇಶವು ಸ್ವಾತಂತ್ರ್ಯದ ಶತಮಾನೋತ್ಸವದತ್ತ ಸಾಗುತ್ತಿರುವಾಗ ಮಹಿಳೆಯರ ಸಹಭಾಗಿತ್ವಕ್ಕೆ ಈ ಯೋಜನೆ ಹೊಸ ಮುನ್ನಡಿ ಬರೆದಿದೆ. ಮಹಿಳೆಯರಲ್ಲಿ ಇಂತಹ ಮಹತ್ವದ ಸುಧಾರಣೆ, ಬದಲಾವಣೆಗೆ ಸರ್ಕಾರ ಶಕ್ತಿ ಯೋಜನೆ ಮೂಲಕ ವೇದಿಕೆ ಒದಗಿಸಿದೆ ಎಂದರು.
ಸರ್ಕಾರವು ಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿಯನ್ನೇ ಧ್ಯೇಯವಾಗಿಟ್ಟುಕೊಂಡಿದೆ. ಈ ಯೋಜನೆಗಳ ಅನುಷ್ಠಾನದಿಂದ ಮಹಿಳೆಯರ ಸಬಲೀಕರಣ ಮತ್ತು ಅವರ ಜೀವನೋಪಾಯ ಸುಧಾರಣೆಗೆ ಸಹಕಾರಿಯಾಗಲಿದೆ. ಅನ್ನಭಾಗ್ಯ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಬಂದಿದೆ. ಸರ್ಕಾರ ರಚನೆ ಆಗಿ ಅಲ್ಪ ಸಮಯವಾಗಿದ್ದರೂ, ಸಾಧಿಸಿದ ಸಾಧನೆ ಅನೇಕ ಮೈಲುಗಲ್ಲುಗಳನ್ನು ನಿರ್ಮಿಸಿ ದೇಶಕ್ಕೆ ಮಾದರಿಯಾಗಿದೆ. ರಾಜ್ಯದಲ್ಲಿ ಅನುಷ್ಠಾನಗೊಂಡ ಈ ಎಲ್ಲ ಯೋಜನೆಗಳು ದೇಶದಲ್ಲಿಯೇ ವಿಶೇಷ ಯೋಜನೆಗಳಾಗಿ ಗುರುತಿಸಲಾಗುತ್ತಿದೆ ಎಂದರು.