ಹೊಳೆಹೊನ್ನೂರು: ದೇವಾಲಯಗಳು ಗ್ರಾಮಗಳಿಗೆ ಧನಾತ್ಮಕ ಶಕ್ತಿ ನೀಡುತ್ತವೆ ಎಂದು ಚನ್ನಗಿರಿ ಕೇದಾರ ಶಾಖಾ ಮಠದ ಶ್ರೀ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಹೊಳೆಹಟ್ಟಿ ಹಳೇ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಭೂತರಾಯ, ಚೌಡೇಶ್ವರಿ ದೇವಸ್ಥಾನಗಳ ಆಲಯ ಪ್ರವೇಶ ಹಾಗೂ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಪೂಜೆ, ಪ್ರಾರ್ಥನೆಗಳಿಂದ ಸುಜ್ಞಾನ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಪ್ರತಿಯೊಬ್ಬರೂ ಸಮಾಜಮುಖಿಯಾಗಿ ಧರ್ಮ ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳಬೇಕು. ಸಂಪಾದನೆಯ ಅಲ್ಪ ಭಾಗವಾದರೂ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕು. ಅಡ್ಡದಾರಿಯಲ್ಲಿ ಸಂಪಾದಿಸಿದ ಐಶ್ವರ್ಯ ನೆಮ್ಮದಿ ಕೊಡುವುದಿಲ್ಲ. ಧಾರ್ಮಿಕ ಕಾರ್ಯಗಳಿಗೆ ಕೈಜೋಡಿಸಿದರೆ ಫಲ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
ಪಾಲಕರು ವೃದ್ಧಾಶ್ರಮಗಳ ಪಾಲಾಗಬಾರದು. ಕುಟುಂಬದ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ ಸೌಜನ್ಯಗಳಿಂದ ಬದುಕು ನಡೆಸಿ, ಕೂಡಿ ಬಾಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಸನ್ಮಾರ್ಗದಲ್ಲಿ ನಡೆಯುವುದನ್ನು ಕಲಿಸಬೇಕು. ಸ್ವಾರ್ಥಕ್ಕಾಗಿ ಬದುಕು ನಡೆಸದೆ ಸಮಾಜದಲ್ಲಿರುವ ತನ್ನವರಿಗಾಗಿ ಮಿಡಿಯವುದನ್ನು ಕಲಿಯಬೇಕು. ಗ್ರಾಮದೈವದ ಪ್ರಾರ್ಥನೆಯಿಂದ ಬದುಕಿನ ಸಂಕಷ್ಟಗಳು ದೂರಾಗುತ್ತವೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಪ್ರಸನ್ನಕುಮಾರ್, ಮುಖಂಡ ಕಾಡಾ ವೀರಪ್ಪ, ಚಿಕ್ಕಣ್ಣ, ಶೇಖರಪ್ಪ, ಈಶ್ವರಪ್ಪ, ವೀರೇಶಪ್ಪ, ಜಯಪ್ಪ, ಬಸವರಾಜಪ್ಪ, ರಂಗಪ್ಪ, ಚಂದ್ರಪ್ಪ, ಬೂದಿಸ್ವಾಮಿ ಇತರರಿದ್ದರು.