ನ್ಯೂಸ್

ಸಕಾರಾತ್ಮಕ ಮನೋಭಾವ

ಬಾಬುಪ್ರಸಾದ್​ ಮೋಡಿಸ್​
ಉಪನ್ಯಾಸಕರೊಬ್ಬರು ಒಂದು ಬಿಳಿ ಪರದೆಯನ್ನು ಶ್ರೋತ್ರುಗಳ ಮುಂದಿಟ್ಟು, ನಾನು ನಿಮಗೆ 3 ನಿಮಿಷಗಳನ್ನು ಕೊಡುತ್ತೇನೆ, ಇದರಲ್ಲಿ ಏನನ್ನು ನೀವು ಕಾಣುತ್ತಿದ್ದೀರಿ ತಿಳಿಸಿ ಎಂದರು. ಪರದೆಯನ್ನು ಸೂಕ್ಷ್ಮವಾಗಿ ಗಮನಿಸಿದ ಸಭಿಕರು, ಒಂದೆರಡು ಸಣ್ಣ ಚುಕ್ಕೆಗಳನ್ನು ಕಂಡೆವು ಎಂದರು. ಉಪನ್ಯಾಸಕರು, ಇನ್ನು ಏನನ್ನಾದರೂ ಗಮನಿಸುತ್ತಿದ್ದೀರಾ ಎಂದಾಗ, ಇಲ್ಲ ಎಂದರು.

ಆಗ ಉಪನ್ಯಾಸಕರು, ಇದೇ ನೋಡಿ ನಮ್ಮ ಜೀವನ, ನಮ್ಮ ಮನಸ್ಸಿನ ಪರಿಸ್ಥಿತಿ ಎಂದರು. ಸಭಿಕರಿಗೆ ಅವರ ಮಾತಿನ ಒಳಾರ್ಥ ತಿಳಿಯಲಿಲ್ಲ. ನಿಮ್ಮಲ್ಲಿ ಬಹುತೇಕರು ಪರದೆಯಲ್ಲಿ ಒಂದೆರಡು ಸಣ್ಣ ಕಪ್ಪು ಚುಕ್ಕೆಗಳನ್ನು ಮಾತ್ರ ಕಂಡರು. ಆದರೆ ಇಷ್ಟು ದೊಡ್ಡದಾದ ಬಿಳಿಯ ಪರದೆಯನ್ನು ಗಮನಿಸಲಿಲ್ಲ ಅಥವಾ ಅದಕ್ಕೆ ಗಮನಕೊಡಲಿಲ್ಲ ಅಲ್ಲವೇ? ಎನ್ನಲು, ಸಭಿಕರು ಹೌದೆಂದರು. ಅದೇ ರೀತಿ ನಮ್ಮ ಜೀವನದಲ್ಲಿ ನಾವು ಸಂತೋಷಪಡುವ ಅನೇಕ ಸಂಗತಿಗಳು ಇರುತ್ತವೆ. ಅದನ್ನು ನಾವು ಬಹುತೇಕ ಸಮಯ ಮರೆತು, ಇಲ್ಲದಿರುವ ವಸ್ತುವನ್ನೋ ಅಥವಾ ಬೇರೆ ಬೇಡದಿರುವ ವಿಷಯವನ್ನೋ ಆಲೋಚಿಸುತ್ತಾ, ಚಿಂತಿಸುತ್ತಾ ನಮ್ಮ ಆನಂದವನ್ನು ನಾವೇ ನಾಶಪಡಿಸಿಕೊಳ್ಳುತ್ತೇವೆ. ಆದ್ದರಿಂದ ಇರುವುದನ್ನು ಸಂತೋಷದಿಂದ ಅನುಭವಿಸುತ್ತಾ, ಇನ್ನೂ ಹೆಚ್ಚಿನದನ್ನು ಪಡೆಯುವ ಇಚ್ಛೆಯಿದ್ದರೆ, ಪ್ರಯತ್ನ ಮಾಡುವ ಮನೋಭಾವ ಬೆಳಸಿಕೊಂಡರೆ ನಾವು ಆನಂದದಿಂದಿರಲು ಸಾಧ್ಯ.

ವಿದ್ಯಾರ್ಥಿಯ ದೆಸೆಯಲ್ಲಿ, ಓದು ಮುಗಿದರೆ ಸಾಕು ಎಂದು ಆಲೋಚಿಸುತ್ತಿರುತ್ತೇವೆ. ನಂತರ ಕೆಲಸವೊಂದು ಸಿಕ್ಕರೆ ಸಾಕು ಎಂದೂ ಕೆಲಸ ಸಿಕ್ಕರೆ, ಇನ್ನೂ ಹೆಚ್ಚಿನ ಹಣ ಪಡೆಯುವ ಕೆಲಸ ಇಲ್ಲ ಎಂದು ದುಃಖಿಸುತ್ತೇವೆ. ಸಿಕ್ಕರೂ, ಸಹೋದ್ಯೋಗಿಗಳು ಅಥವಾ ಮೇಲ್ವಿಚಾರಕರು ಸರಿಯಿಲ್ಲ, ಅದು ಸರಿಯಿದ್ದರೆ ಜೀವನ ಚೆನ್ನಾಗಿರುತ್ತದೆ ಎಂದು ಚಿಂತಿಸುತ್ತೇವೆ. ನಾವು ಆಲೋಚಿಸಿದಂತೆ, ಅದೂ ಒಂದು ಪಕ್ಷ ನೇರವೇರಿದರೆ, ಮದುವೆಯ ಚಿಂತೆ. ಮದುವೆಯಾದ ಮೇಲೆ, ಮಕ್ಕಳ ಚಿಂತೆ, ಮೊಮ್ಮಕ್ಕಳ ಚಿಂತೆ ಎಂದಾಗ ಬಹುತೇಕ ಶ್ರೋತ್ರುಗಳು ಹೌದೆಂದರು. ಹೀಗೆ ಚಿಂತೆಯ ಕೂಪದಲ್ಲಿ ಓದ್ದಾಡುವ ಬದಲು, ಸಕರಾತ್ಮಕ ಮನೋಭಾವದಿಂದ ಆನಂದಿಸುವ ಕಲೆಯನ್ನು ಕಲಿಯುವುದು ಜಾಣ್ಮೆಯಲ್ಲವೇ?