ನ್ಯೂಸ್

ಪೋಷಣ್ ಅಭಿಯಾನ ಸದ್ಬಳಕೆಯಾಗಲಿ

ವಸಂತಕುಮಾರ್ ಬಿ

ಚಾಮರಾಜನಗರ: ಮಕ್ಕಳ ಬೆಳವಣಿಗೆ ಮತ್ತು ಮಹಿಳಾ ಸಬಲೀಕರಣದ ದೂರದೃಷ್ಟಿ ಇಟ್ಟುಕೊಂಡು ರಾಷ್ಟ್ರೀಯ ಪೋಷಣ್ ಅಭಿಯಾನ ನಡೆಸಲಾಗುತ್ತಿದ್ದು, ಅರ್ಹರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ ಹಾಗೂ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಕ್ರಮ ಆರೈಕೆ, ರಕ್ತಹೀನತೆ, ಬೆಳವಣಿಗೆಯ ಮೇಲ್ವಿಚಾರಣೆ, ಬಾಲಕಿಯರ ಶಿಕ್ಷಣ, ಆಹಾರ, ಮದುವೆಯ ಸರಿಯಾದ ವಯಸ್ಸು, ನೈರ್ಮಲ್ಯ ಮತ್ತು ಆರೋಗ್ಯಕರ ಆಹಾರ ಮೇಲೆ ಕೇಂದ್ರೀಕರಿಸಿದ ಒಂದು ತಿಂಗಳ ಅವಧಿಯ ಚಟುವಟಿಕೆಯನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆ ಮತ್ತು ಮಹಿಳಾ ಸಬಲೀಕರಣದ ದೂರದೃಷ್ಟಿಯಿಂದ ನಡೆಸಲಾಗುವ ಕಾರ್ಯಕ್ರಮವಾಗಿದೆ. ಅಲ್ಲದೆ, ಮಕ್ಕಳಿಗೆ ಶಿಕ್ಷಣ, ಪೌಷ್ಟಿಕ ಆಹಾರ ನೀಡಲು ಸರಕಾರ ಹಲವು ಕಾರ್ಯಕ್ರಮ ಜಾರಿಗೆ ತಂದಿದೆ. ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧನಾಗಿದ್ದು ನಮ್ಮ ತಂದೆ ದಿ. ಮಹದೇವ ಪ್ರಸಾದ್ ಅವರ ಕಾಲದಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಪ್ರಮಾಣದಲ್ಲೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನದಡಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂತರ ಗರ್ಭಿಣಿಯರ ಆರೋಗ್ಯ, ಬಾಲ್ಯ ವಿವಾಹದ ದುಷ್ಪರಿಣಾಮದ ಕುರಿತು ಮಾಹಿತಿ ಒದಗಿಸಲಾಯಿತು.

ನಿಟ್ರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೀನಾಕ್ಷಿ ಮಹೇಶ, ಚಾಮುಲ್ ನಿರ್ದೇಶಕರಾದ ನಂಜುಂಡಪ್ರಸಾದ್, ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆ ಅಧಿಕಾರಿ ಎಂ.ಹೇಮಾವತಿ, ಜಿಲ್ಲಾ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ಸರಸ್ವತಿ, ತಾಲೂಕು ಆರೋಗ್ಯ ಅಧಿಕಾರಿ ಅಲಿಂ ಪಾಷಾ ಇತರರಿದ್ದರು.

ಪೌಷ್ಟಿಕ ಆಹಾರಗಳ ಪ್ರದರ್ಶನ: ರಾಷ್ಟ್ರೀಯ ಪೋಷಣ್ ಅಭಿಯಾನ ಮಾಸಾಚರಣೆ ಅಂಗವಾಗಿ ತಾಲೂಕಿನ ವಿವಿಧ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಒಲೆಯನ್ನು ಬಳಸದೆ ತಯಾರಿಸಿದ ಪೌಷ್ಟಿಕಾಂಶವುಳ್ಳ ತಿಂಡಿ, ತಿನಿಸುಗಳನ್ನು ಪ್ರದರ್ಶಿಸಿದರು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.ಉದ್ಘಾಟಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಇದ್ದರು.