ನ್ಯೂಸ್

ಪುಷ್ಪಗಳಿಂದ ಮನಸೂರೆಗೊಂಡ ಕೇದಾರನಾಥ- ಮೋದಿ ಹೆಸರಲ್ಲಿ ಮೊದಲ ಪೂಜೆ: ಭಕ್ತರಿಗೆ ಸಿಗಲಿದೆಯೇ ದರುಶನ ಭಾಗ್ಯ?

ಉತ್ತರಾಖಂಡ: ವಿಶ್ವ ಪ್ರಸಿದ್ಧ ಕೇದಾರನಾಥನ ದರುಶನಕ್ಕೆ ಪ್ರತಿ ವರ್ಷವೂ ಈ ಸಮಯದಲ್ಲಿ ಜನಸಾಗರವೇ ಹರಿದು ಬರುತ್ತಿತ್ತು. ತಮ್ಮ ಇಷ್ಟದ ಶಿವನ ಅಲಂಕಾರವನ್ನು ಕಣ್ತುಂಬಿಸಿಕೊಳ್ಳಲು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಧನ್ಯರಾಗುತ್ತಿದ್ದರು.

ಆದರೆ ಈ ಬಾರಿಯ ಲಾಕ್​ಡೌನ್​ ಎಲ್ಲವನ್ನೂ ಕಸಿದುಕೊಂಡಿದೆ. ಕರೊನಾ ವೈರಸ್​ ಭೀತಿಯಿಂದಾಗಿ ಎಲ್ಲಾ ದೇವಾಲಯಗಳಂತೆ ಕೇದಾರನಾಥನಿಗೂ ಬೀಗ ಹಾಕಲಾಗಿದೆ. ಆದರೆ ತಲೆತಲಾಂತರಗಳಿಂದ ನಡೆದು ಬಂದಿರುವ ಸಂಪ್ರದಾಯದಂತೆ ಇಂದು ಬೆಳಗ್ಗೆ 6.10ಕ್ಕೆ ದೇವಾಲಯವನ್ನು ತೆರೆಯಲಾಗಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಮುಖ್ಯದ್ವಾರವನ್ನಷ್ಟೇ ತೆರೆಯಲಾಗಿದೆ. ಶಿವನಿಗೆ 10 ಕ್ವಿಂಟಲ್​ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ನಡೆಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೊದಲ ಪೂಜೆ ನೆರವೇರಿಸಲಾಯಿತು.

ಗರ್ವಾಲ್ ಹಿಮಾಲಯದ ಕೇದಾರನಾಥದಲ್ಲಿ ಹನ್ನೊಂದನೆಯ ಜ್ಯೋತಿರ್ಲಿಂಗದ ಬಾಗಿಲನ್ನು ಮಾತ್ರ ತೆರೆದು ಪೂಜೆ ಸಲ್ಲಿಸಲಾಗಿದೆ. ಸಂಪ್ರದಾಯದಂತೆ ಬೆಳಗ್ಗಿನ ಜಾವ 3 ಗಂಟೆಗೆ ಅರ್ಚಕ, ದೇವಾಲಯದ ಅಧಿಕಾರಿಗಳು ಹಾಗೂ ಕೆಲವು ಭದ್ರತಾ ಸಿಬ್ಬಂದಿಗಳ ಸಮ್ಮುಖದಲ್ಲಿ ದೇವಾಲಯದ ಬಾಗಿಲುಗಳನ್ನು ತೆರೆಯಲಾಗಿತ್ತು. ಕೇದಾರ ಜಗದ್ಗುರುಗಳಾದ ಶ್ರೀ ಭೀಮಾ ಶಂಕರ ಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು​ ಸಂಪ್ರದಾಯದಂತೆ ಪೂಜೆ ನೆರವೇರಿಸಬೇಕಿತ್ತು. ಆದರೆ ಅವರು 14 ದಿನಗಳ ಕ್ವಾರಂಟೈನ್​ನಲ್ಲಿ ಇರುವ ಕಾರಣ, ಅವರು ಹಾಜರಾಗಿರಲಿಲ್ಲ.

'ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ರುದ್ರಾಭಿಷೇಕ ನಡೆಸಲಾಗಿದೆ. ಶಿವನನ್ನು ಚಂಡುಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗಿತ್ತು. ಇಡೀ ಪ್ರದೇಶ ಹಿಮದಿಂದ ಆವೃತ್ತವಾಗಿತ್ತು, ಆದರೆ ಈ ಸಂದರ್ಭದಲ್ಲಿ ಪ್ರತಿ ವರ್ಷ ಇರುತ್ತಿದ್ದ ಜನಜಂಗುಳಿ ಮಾತ್ರ ಈ ಬಾರಿ ಇಲ್ಲವಾಗಿದೆ. ಲಾಕ್​ಡೌನ್​ ಕಾರಣ, ಭಕ್ತಾದಿಗಳಿಗೆ ಕೇದಾರನಾಥನ ಪೂಜೆಯ ದರ್ಶನಕ್ಕೆ ಅವಕಾಶ ನೀಡಲಿಲ್ಲ' ಎಂದು ಅರ್ಚಕರು ತಿಳಿಸಿದ್ದಾರೆ.

ನಾಲ್ಕು ಪ್ರಸಿದ್ಧ ದೇವಾಲಯಗಳಾದ ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿಯನ್ನು ವರ್ಷದ ಆರು ತಿಂಗಳು ಮುಚ್ಚಲಾಗಿರುತ್ತದೆ. ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ನಡುವೆ ತೆರೆದು ಭಕ್ತರಿಗೆ ನೋಡುವ ಅವಕಾಶ ಕಲ್ಪಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಶೇಷ ಪೂಜೆಗಳು ನೆರವೇರುವುದು ಸಂಪ್ರದಾಯ. ಅಕ್ಷಯ ತೃತೀಯ ಸಂದರ್ಭದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಏಪ್ರಿಲ್ 26 ರಂದು ತೆರೆಯಲಾಗಿತ್ತು. ಮೇ 15 ರಂದು ಬದ್ರಿನಾಥ ದೇವಾಲಯ ತೆರೆಯಲಿದೆ.

ಲಾಕ್​ಡೌನ್​ ಮುಗಿದ ಮೇಲಷ್ಟೇ ಭಕ್ತರಿಗೆ ದರುಶನ ಭಾಗ್ಯ ಸಿಗಲಿದೆ (ಏಜೆನ್ಸೀಸ್​)