ಪಂಜಾಬ್: ಹರಿಯಾಣದ ಖ್ಯಾತ ಗಾಯಕ ರಾಜು ಪಂಜಾಬಿ (40) ಮಂಗಳವಾರ ರಾತ್ರಿ ನಿಧನರಾದರು. ಮಾಹಿತಿಯ ಪ್ರಕಾರ, ಅವರು ಕಳೆದ 10 ದಿನಗಳಿಂದ ಹಿಸಾರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಾಂಡೀಸ್‌ನಿಂದ ಬಳಲುತ್ತಿದ್ದರು. ರಾಜು ಪಂಜಾಬಿ ಸಾವಿನ ಸುದ್ದಿ ಕೇಳಿ ಇದೀಗ ಅವರ ಅಭಿಮಾನಿಗಳು ಮತ್ತು ಸಂಬಂಧಿಕರು ಆಸ್ಪತ್ರೆಗೆ ತೆರಳಿದ್ದಾರೆ. ಪ್ರಸ್ತುತ, ಅವರ ಮನೆ ಹಿಸಾರ್‌ನ ಆಜಾದ್ ನಗರದಲ್ಲಿದ್ದು, ಅಭಿಮಾನಿಗಳ ಗುಂಪು ಅವರನ್ನು ಕೊನೆಯ ಬಾರಿಗೆ ಕಣ್ತುಂಬಿಕೊಳ್ಳಲು ದೌಡಾಯಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ರಾಜು ಪಂಜಾಬಿ ಅವರ ಚಿಕಿತ್ಸೆ ಹಿಸಾರ್‌ನ ಖಾಸಗಿ ಆಸ್ಪತ್ರೆಯಲ್ಲಿ ನಡೆಯುತ್ತಿತ್ತು. ಈ ವೇಳೆ ಅವರು ಚೇತರಿಸಿಕೊಂಡು ಮನೆಗೆ ಮರಳಿದ್ದರು. ಆದರೆ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿರುವ ರಾಜು ಪಂಜಾಬಿ ಹರಿಯಾಣ ಮಾತ್ರವಲ್ಲದೆ, ಪಂಜಾಬ್ ಮತ್ತು ರಾಜಸ್ಥಾನದಲ್ಲೂ ಗುರುತಿಸಿಕೊಂಡಿದ್ದಾರೆ. ಅವರ ಪ್ರಸಿದ್ಧ ಹಾಡುಗಳಾದ ತು ಚೀಜ್ ಲಜ್ವಾಬ್, ದೇಸಿ-ದೇಸಿ ಮತ್ತು ಸಾಲಿಡ್ ಬಾಡಿ ಬಹಳ ಪ್ರಸಿದ್ಧವಾಗಿವೆ.
ಹರಿಯಾಣ ಸಂಗೀತ ಉದ್ಯಮದಲ್ಲಿ ರಾಜು ಪಂಜಾಬಿ ಹೊಸ ಗುರುತು ಮೂಡಿಸಿದರು. ರಾಜು ಪಂಜಾಬಿ ಮತ್ತು ಸಪ್ನಾ ಚೌಧರಿ ಜೋಡಿ ಹರಿಯಾಣದಲ್ಲಿ ಬಹಳ ಪ್ರಸಿದ್ಧವಾಗಿತ್ತು. ಅವರ ಕೊನೆಯ ಹಾಡು "ಆಪ್ಸೆ ಮಿಲ್ಕೆ ಯಾರಾ ಹಮ್ಕೋ ಅಚ್ಛಾ ಲಗಾ" ಈ ತಿಂಗಳು ಆಗಸ್ಟ್ 12ರಲ್ಲಿ ಬಿಡುಗಡೆಯಾಯಿತು. ಹಾಡು ಬಿಡುಗಡೆಯಾದಾಗ ರಾಜು ಪಂಜಾಬಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕೊನೆಯ ಹಾಡನ್ನು ಸಿದ್ಧಪಡಿಸಲು ಸುಮಾರು 2 ವರ್ಷಗಳನ್ನು ತೆಗೆದುಕೊಂಡರು.