ಬೆಂಗಳೂರು: ಆಂಧ್ರ ಪ್ರದೇಶದಲ್ಲಿ ತಿರಸ್ಕೃತವಾಗಿದ್ದ ಬಿತ್ತನೆ ಬೀಜಗಳನ್ನು ಕರ್ನಾಟಕಕ್ಕೆ ತಂದು ಮಾರಾಟ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ.
ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ ಸೇರಿದಂತೆ 10,000 ಕ್ವಿಂಟಾಲ್ ಗೂ ಹೆಚ್ಚು ಬೀಜಗಳನ್ನು ಈ ಜಾಲ ನಮ್ಮ ರಾಜ್ಯದಲ್ಲಿ ಮಾರಾಟ ಮಾಡುತ್ತಿತ್ತು.
ವಿಷಯ ತಿಳಿದು ಕಾರ್ಯಾಚರಣೆ ನಡೆಸಿದ ಕೃಷಿ ಇಲಾಖೆ ಅಧಿಕಾರಿಗಳು, ಈ ಕಳಪೆ ಬಿತ್ತನೆ ಬೀಜಗಳನ್ನು ವಶಕ್ಕೆ ಪಡೆದು ಅದನ್ನು ಮಾರುತ್ತಿದ್ದವರ ವಿರುದ್ಧ 8 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ವಿಷಯವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೇ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಆರ್ಥಿಕ ಸಂಕಷ್ಟದಲ್ಲಿಯೂ ರೈತರು ಹಾಗೂ ದುಡಿಯುವ ಜನರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಳಜಿ ವಹಿಸಿ ಪರಿಹಾರದ ಪ್ಯಾಕೇಜ್ ಪ್ರಕಟಿಸಿದ್ದಾರೆ. ಮಾರಕ ಪಿಡುಗಿನಿಂದ ಜೀವ ಉಳಿಸಿಕೊಳ್ಳುವುದು ಮುಖ್ಯವಾಗಿದ್ದು, ನಂತರ ಬದುಕು ಕಟ್ಟಿಕೊಳ್ಳುವತ್ತ ಯೋಚಿಸಬೇಕು ಎಂದರು.
ಹಣ್ಣು ಮತ್ತು ತರಕಾರಿ ಬೆಳೆದವರಿಗೂ ಸದ್ಯದಲ್ಲೇ ಪರಿಹಾರ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಗೊತ್ತಿರುವ ಕಾರಣ ಇಂತಿಷ್ಟೇ ಪರಿಹಾರ ಕೊಡಿ ಎಂದು ಒತ್ತಾಯಿಸಲು ಆಗುವುದಿಲ್ಲ ಎಂದು ಹೇಳಿದರು.
ಮದುವೆ ಕಾರ್ಯಕ್ರಮಗಳಿಲ್ಲದೆ, ಹಣ್ಣಿನ ಜ್ಯೂಸ್ ಅಂಗಡಿಗಳು ತೆರೆಯದೆ ತರಕಾರಿ ಮತ್ತು ಹಣ್ಣುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಎಷ್ಟು ಪರಿಹಾರ ನೀಡಬೇಕೆಂಬುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಅವರೇ ಎಕರೆಗೆ ಇಂತಿಷ್ಟು ಅಂತ ನಿಗದಿ ಮಾಡುತ್ತಾರೆ ಎಂದರು.
ಒಂದು ತಿಂಗಳಿಂದ ಎಲ್ಲ 30 ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರ ಸಮಸ್ಯೆ ಆಲಿಸಿ ಮುಖ್ಯಮಂತ್ರಿಗೆ ಸಲ್ಲಿಸಿದ ವರದಿ ರೂಪದಲ್ಲಿ ರೈತರ ನೆರವಿಗೆ ಬರುವಂತೆ ಮನವಿ ಮಾಡಿದ್ದೆ. ಇದಕ್ಕೆ ಪೂರಕವಾಗಿ ಸಿಎಂ ೋಷಿಸಿದ ಪ್ಯಾಕೇಜ್‌ನಲ್ಲಿ ಹೂ ಬೆಳೆಗಾರರಿಗೆ ಪರಿಹಾರ ಪ್ರಕಟಿಸಿದ್ದಾರೆ ಎಂದು ಹೇಳಿದರು.