ಬೆಂಗಳೂರಿಗೆ ಕಳಪೆ ಮಾಂಸ ಮಾರಾಟ ಮಾಡುತ್ತಿರುವವರ ಬಂಧನ ಹಾಗೂ ಎಸಿಪಿ ಅಮಾನತಿಗೆ ಒತ್ತಾಯಿಸಿ ವಿಜಯ್ ರೇವಣಕರ್, ದಿನೇಶ್ ಚವ್ಹಾಣ್, ಮುಕುಂದ, ಶಿವಶಂಕರ ನಾಯಕ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು. 
ನ್ಯೂಸ್

ಕಳಪೆ ಮಾಂಸ ಪೂರೈಕೆ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಬೆಂಗಳೂರಿಗೆ ಅಕ್ರಮವಾಗಿ ಮತ್ತು ಕಳಪೆ ಮಾಂಸ ಸರಬರಾಜು ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು. ಹಿಂದು ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರ ಮೇಲೆ ದೌರ್ಜನ್ಯವೆಸಗಿದ ಎಸಿಪಿ ಚಂದನ್‌ಕುಮಾರ್ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಹಿಂದು ರಾಷ್ಟ್ರ ಸಮನ್ವಯ ಸಮಿತಿ ಪ್ರಮುಖರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ರೆಸ್ಟೋರೆಂಟ್ ಮತ್ತು ಪ್ರತಿಷ್ಠಿತ ಹೋಟೆಲ್‌ಗಳಿಗೆ ಅನೇಕ ವರ್ಷಗಳಿಂದ ಅಕ್ರಮವಾಗಿ ಹೊರ ರಾಜ್ಯಗಳಿಂದ ಬಸ್ ಮತ್ತು ರೈಲುಗಳ ಮೂಲಕ ಅಕ್ರಮ ಮಾಂಸ ಸರಬರಾಜಾಗುತ್ತಿದೆ. ಆಹಾರ ಸುರಕ್ಷತಾ ಇಲಾಖೆಯ ಎಲ್ಲ ನಿಯಮ ಉಲ್ಲಂಘಿಸಿ ಮಾಂಸ ಕೆಡದಂತೆ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಈ ಮಾಂಸವನ್ನು ಸೇವಿಸಿದ ಜನರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ನಲ್ಲಿ 90 ಬಾಕ್ಸ್ ಕಳಪೆ ಮಾಂಸ ಸಿಕ್ಕಿದೆ. ಸಾರ್ವಜನಿಕರು ಈ ಬಗ್ಗೆ ಆಹಾರ ಅಧಿಕಾರಿಗಳಿಗೆ ದೂರು ನೀಡಿದ್ದರು. ಕೇವಲ ಎರಡು ಬಾಕ್ಸ್‌ಗಳಲ್ಲಿನ ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕೊಂಡೊಯ್ದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿದರು.
ಕೂಡಲೇ ಅಕ್ರಮ ಮಾರಾಟಗಾರರನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಅಕ್ರಮ ಮಾಂಸದ ದಂಧೆ ನಡೆಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ದೂರು ನೀಡಿದ ಹಿಂದು ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರ ಮೇಲೆಯೇ ಶಾಂತಿಭಂಗ ಮಾಡಿದ್ದಾರೆ ಎಂದು ಎಸಿಪಿ ಚಂದನ್‌ಕುಮಾರ್ ದೂರು ದಾಖಲಿಸಿದ್ದಾರೆ. ಠಾಣೆಯಲ್ಲಿ ಕೆರೆಹಳ್ಳಿ ಅವರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗಿದೆ. ಹೀಗಾಗಿ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ವಿಜಯ್ ರೇವಣಕರ್, ನವೀನ್, ಶಿವಶಂಕರ ನಾಯಕ್, ದಿನೇಶ್ ಚವ್ಹಾಣ್, ಮುಕುಂದ ಇತರರು ಪ್ರತಿಭಟನೆಯಲ್ಲಿದ್ದರು.