ನ್ಯೂಸ್

ಲಾರಿ ಚಾಲಕನ ಕಿಡ್ನ್ಯಾಪ್ ಕೇಸ್​! ಪೂಜಾ ಖೇಡ್ಕರ್​ ಕುಟುಂಬ ಕಣ್ಮರೆ, ಏನಿದು ಪ್ರಕರಣ? | Puja Khedkar

Puja Khedkar: ವಂಚನೆ, ಒಬಿಸಿ ಮತ್ತು ಅಂಗವಿಕಲ ಕೋಟಾದ ಪ್ರಯೋಜನಗಳನ್ನು ತಪ್ಪಾಗಿ ಪಡೆದ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಐಎಎಸ್ ಟ್ರೈನಿ ಪೂಜಾ ಖೇಡ್ಕರ್ (Puja Khedkar) ತಂದೆ ಮತ್ತು ತಾಯಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲು ಶೋಧ ಕಾರ್ಯ ನಡೆಯುತ್ತಿದೆ.

ವಜಾಗೊಂಡಿರುವ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಂದೆ ದಿಲೀಪ್ ಖೇಡ್ಕರ್ ಮತ್ತು ಅವರ ಬಾಡಿಗಾರ್ಡ್​, ಲಾರಿ ಚಾಲಕನನ್ನು ಕಿಡ್ನ್ಯಾಪ್​ ಮಾಡಿ, ತಮ್ಮ ಪುಣೆ ನಿವಾಸದಲ್ಲಿ ಬಚ್ಚಿಟ್ಟಿರುವ ವಿಷಯ ಪೊಲೀಸರಿಗೆ ಲಭಿಸಿದ್ದೇ ತಡ, ದಿಲೀಪ್​ ನಿವಾಸಕ್ಕೆ ಖಾಕಿ ಪಡೆ ಎಂಟ್ರಿಕೊಟ್ಟು, ಸೆರೆಯಾಗಿದ್ದ ಲಾರಿ ಚಾಲಕ ಕುಮಾರ್​ನನ್ನು ರಕ್ಷಿಸಿದರು. ಈ ವೇಳೆ ಖೇಡ್ಕರ್ ದಂಪತಿಯನ್ನು ವಿಚಾರಣೆಗೆ ಕರೆದ ಪೊಲೀಸರಿಗೆ ನಾವು ನೇರವಾಗಿ ಠಾಣೆಗೆ ಬರುತ್ತೇವೆ ಎಂದು ಹೇಳಿದ ದಂಪತಿ, ಅಂದಿನಿಂದ ಇಂದಿನವರೆಗೆ ಪತ್ತೆಯೇ ಇಲ್ಲ.

ಪೊಲೀಸರ ಪ್ರಕಾರ, ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಖಾಕಿ ಪೂಜಾ ಖೇಡ್ಕರ್ ತಂದೆಗೆ ನೋಟಿಸ್​ ನೀಡಲಾಯಿತು. ಆದರೆ, ಅವರ ಪತ್ನಿ ಮನೋರಮಾ ಮಾತ್ರ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಾರಿ ಚಾಲಕ ಪ್ರಹ್ಲಾದ್ ಕುಮಾರ್​ನನ್ನು ಖೇಡ್ಕರ್ ಮನೆಯಿಂದ ರಕ್ಷಿಸಲು ಹೋದ ಖಾಕಿ ಮೇಲೆ ಮಹಿಳೆ, ತಮ್ಮ ಮನೆಯಲ್ಲಿದ್ದ ಸಾಕು ನಾಯಿಗಳನ್ನು ದಾಳಿ ಮಾಡಲು ಬಿಟ್ಟಿರುವುದಾಗಿ ಪೊಲೀಸರು ಆರೋಪಿಸಿದ್ದಾರೆ.

ತಮ್ಮ ಐಷಾರಾಮಿ ಎಸ್‌ಯುವಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಹಿನ್ನೆಲೆ, ವಾಹನ ಸಂಪೂರ್ಣ ಜಖಂಗೊಂಡಿದೆ. ಕಾರಿಗೆ ಉಂಟಾದ ಹಾನಿಗೆ ಪರಿಹಾರ ಕೊಡುವಂತೆ ಅಮಾಯಕನನ್ನು ಪೂಜಾ ತಂದೆ ಅಪಹರಿಸಿದ್ದಾಗಿ ವರದಿ ಉಲ್ಲೇಖಿಸಿದೆ. ಪೂಜಾಳ ತಂದೆ ದಿಲೀಪ್ ಖೇಡ್ಕರ್, ಪತ್ನಿ ಮನೋರಮಾ ಮತ್ತು ಅವರ ಬಾಡಿಗಾರ್ಡ್ ಪೊಲೀಸರ ನೋಟಿಸ್​ಗೂ ಸ್ಪಂದಿಸದೆ, ಖಾಕಿ ಕಣ್ಣಿನಿಂದ ದೂರ ಉಳಿದಿದ್ದಾರೆ,(ಏಜೆನ್ಸೀಸ್).