ಆಂಧ್ರಪ್ರದೇಶ: ಟಾಲಿವುಡ್ ಬೆಡಗಿ, ನಟಿ ಪೂಜಾ ಹೆಗ್ಡೆ ಸದ್ಯ ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳದೆ ಇರುವುದು ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರ ತಂದಿತ್ತು. ಕಳೆದ ವರ್ಷದಿಂದ ಯಾವುದೇ ಚಿತ್ರಕ್ಕೂ ಸಹಿ ಹಾಕದ ಪೂಜಾ, ಕಥೆಯ ಆಯ್ಕೆಯಲ್ಲಿ ತುಂಬ ಚ್ಯೂಸಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಹೊಸ ಪ್ರಾಜೆಕ್ಟ್ಗೆ ಸಹಿ ಮಾಡುವ ಮೂಲಕ ಮತ್ತೆ ನಟನೆಗೆ ಮರಳಿದ್ದಾರೆ. ಈ ಸುದ್ದಿ ಅವರ ಫ್ಯಾನ್ಸ್ಗಳಲ್ಲಿ ಅತೀವ ಸಂತಸ ಮೂಡಿಸಿದೆ.
ಎಲ್ಲರೂ ನಿರೀಕ್ಷಿಸಿದಂತೆ ಮಹೇಶ್ ಬಾಬು ನಟನೆಯ 'ಗುಂಟೂರು ಕಾರಂ' ಚಿತ್ರದಲ್ಲಿ ಪೂಜಾ ಹೆಗ್ಡೆ ನಟಿಸಬೇಕಿತ್ತು. ಆದರೆ, ಸಂಭಾವನೆ ವಿಷಯದಲ್ಲಿ ಉಂಟಾದ ಗೊಂದಲದಿಂದ ನಟಿ ಹೊರಬಂದರು ಎಂದು ವರದಿಯಾಗಿತ್ತು. ಕಳೆದ ವರ್ಷದಿಂದಲೂ ಪೂಜಾ ಯಾವ ಚಿತ್ರಕ್ಕೂ ಸಹಿ ಹಾಕಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಫ್ಯಾನ್ಸ್, ಯಾವಾಗ ಹೊಸ ಸಿನಿಮಾ ಒಪ್ಪಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದರು. ಇದೀಗ ನಟಿ ಆ ಆಸೆಯನ್ನು ಈಡೇರಿಸಿದ್ದಾರೆ.
ಇದನ್ನೂ ಓದಿ: ಹೂಡಿಕೆದಾರರಿಗೆ 2 ಸ್ಮಾಲ್ಕ್ಯಾಪ್ ಕಂಪನಿಗಳ ಕೊಡುಗೆ: 1:1 ಮತ್ತು 2:1 ಅನುಪಾತದಲ್ಲಿ ನೀಡುತ್ತಿವೆ ಬೋನಸ್ ಷೇರುಗಳು
2023ಕ್ಕೆ ಬಿಡುಗಡೆಯಾದ ಸಲ್ಮಾನ್ ಖಾನ್ ಜತೆಗೆ ನಟಿಸಿದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಪೂಜಾ ಹೆಗ್ಡೆ, ಈಗ 'ಸಂಕಿ' ಎಂಬ ಹಿಂದಿ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಸುನೀಲ್ ಶೆಟ್ಟಿ ಅವರ ಮಗ ಅಹಾನ್ ಶೆಟ್ಟಿಯೊಂದಿಗೆ ಪೂಜಾ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾವನ್ನು ಖ್ಯಾತ ಬಾಲಿವುಡ್ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಲಿದ್ದಾರೆ.
ಪೂಜಾ ಹೆಗ್ಡೆ ಮತ್ತು ಅಹಾನ್ ಶೆಟ್ಟಿ ಅಭಿನಯಿಸಲಿರುವ ಸ್ಯಾಂಕಿ ಸಿನಿಮಾವನ್ನು ಅದ್ನಾನ್ ಎ. ಶೇಖ್ ಮತ್ತು ಯಾಸಿರ್ ಜಾಹ್ ನಿರ್ದೇಶಿಸಲಿದ್ದಾರೆ. ಚಿತ್ರವು ಫೆ.14, 2025ರ ಪ್ರೇಮಿಗಳ ದಿನದಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ,(ಏಜೆನ್ಸೀಸ್).