ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯ. 
ನ್ಯೂಸ್

3 ರಿಂದ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವ

ನಾಪೋಕ್ಲು: ಕೊಡಗಿನ ಪ್ರಪ್ರಥಮ ಪೊನ್ನು ಮುತ್ತಪ್ಪ ದೇವಸ್ಥಾನ ಹಾಗೂ ಎರಡನೇ ಪರಶಿನಿ ಎಂದು ಪ್ರಖ್ಯಾತವಾಗಿರುವ ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವನ್ನು ಏ.3 ರಿಂದ 5 ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ ಚಂದ್ರನ್ ಹೇಳಿದರು.

ಉತ್ಸವದ ಅಂಗವಾಗಿ ಏ.3 ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ ಮತ್ತು ಶುದ್ಧ ಕಳಸವನ್ನು ಕೇರಳ ನೀಲೇಶ್ವರದ ಮುರಳಿ ಕೃಷ್ಣ ತಂತ್ರಿ ಅವರಿಂದ ನಡೆಸಲಾಗುವುದು. ರಾತ್ರಿ 8.30ಕ್ಕೆ ಗುರು ಪೂಜೆ ಹಾಗೂ ಶ್ರೀದೇವಿ ಪೂಜೆ ನಡೆಯಲಿದೆ. ಏ.4ರಂದು ಮಧ್ಯಾಹ್ನ ಪೈಂಗುತ್ತಿ ಹಾಗೂ ಸಂಜೆ ಶ್ರೀ ಮುತ್ತಪ್ಪ ದೇವರ ಕಳಸ ನಡೆಯಲಿದೆ. ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಪ್ರಖ್ಯಾತ ಕೇರಳ ಚಂಡಗಳೊಂದಿಗೆ ನಾಪೋಕ್ಲು ಪೇಟೆಯ ಮುಖ್ಯಬೀದಿಯಲ್ಲಿ ಸನ್ನಿಧಾನಕ್ಕೆ ಮೆರವಣಿಗೆ ಮೂಲಕ ಆಗಮನವಾಗಲಿದೆ. ರಾತ್ರಿ ವೆಳ್ಳಾಟಂ ಬಳಿಕ ಕುಟ್ಟಿಚಾತ ಮತ್ತು ಗುಳಿಗ ದೇವರ ವೆಳ್ಳಾಟಂ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏ.5 ರಂದು ಗುಳಿಗ ಕೋಲ ,ಬಳಿಕ ಕುಟ್ಟಿಚಾತ ಕೋಲ ಹಾಗೂ ತಿರುವಪ್ಪನ್ ಮತ್ತು ಮುತ್ತಪ್ಪ ತೆರೆ ಜರುಗಲಿದೆ. ಉತ್ಸವದ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಕೆ ತಂಗ, ಚಿನ್ನ, ಕಾರ್ಯದರ್ಶಿ ರಾಜೀವನ್, ಉಪ ಕಾರ್ಯದರ್ಶಿ ಮನೋಹರ್, ಖಜಾಂಚಿ ಕಿಶೋರ್ ಪಿ.ಸಿ, ದೇವಾಲಯದ ಪೂಜಾರಿ ಹರಿದಾಸ್ ಮತ್ತು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.