ನ್ಯೂಸ್

ಕಾಂಗ್ರೆಸ್ ನಿಂದ ಮತ್ತೆ ದ್ವೇಷದ ರಾಜಕಾರಣ; ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಮೂರು ದಶಕಗಳ ಹಿಂದೆ ರಾಮಜನ್ಮ ಭೂಮಿ ಹೋರಾಟದಲ್ಲಿ ಪಾಲ್ಗೊಂಡ ಇಬ್ಬರು ಕಾರ್ಯಕರ್ತರ ವಿರುದ್ಧ ಕೇಸ್ ಮರುತೆರೆದು, ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೆ ದ್ವೇಷದ ರಾಜಕಾರಣ ಶುರು ಮಾಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದರು.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ರಥಯಾತ್ರೆ ಸಂದರ್ಭದಲ್ಲಿ ಮೆರವಣಿಗೆ, ಗಲಾಟೆ ಆಗಿದೆ. ಕಲ್ಲು ತೂರಾಟ ನಡೆದಿದೆ ಎಂದು 30 ವರ್ಷಗಳ ಹಿಂದಿನ ಕೇಸ್ ಮತ್ತೆ ಕೆದಕಿದ್ದಾರೆ. ಆಗ 25 ವರ್ಷದ ಯುವಕರಾಗಿದ್ದ ಇಬ್ಬರು ಈಗ ವಯಸ್ಕರು. ಹಳೇ ಕೇಸ್ ಗೆ ಮರು ಜೀವ ನೀಡಿ ಅರೆಸ್ಟ್ ಮಾಡಿದ್ದಾರೆ ಎಂದು ದೂರಿದರು.

ರಾಮಜನ್ಮ ಭೂಮಿಯಲ್ಲಿ ನಿರ್ಮಿಸಿದ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ದೇಶಾದ್ಯಂತ ಸಂಭ್ರಮಿಸುತ್ತಿರುವಾಗ ರಾಜ್ದದ ರಾಮಭಕ್ತರಲ್ಲಿ ಭಯ-ಭೀತಿ ಹುಟ್ಟಿ ಹಾಕಲಾಗುತ್ತಿದೆ. ಲಭ್ಯ ಮಾಹಿತಿ ಪ್ರಕಾರ ರಾಮಜನ್ಮ ಭೂಮಿ ಹೋರಾಟದ ಪ್ರಕರಣಗಳು, ಯಾರೆಲ್ಲ ಪ್ರಮುಖರು ಭಾಗಿಯಾಗಿದ್ದಾರೆ ಎಂದು ಮತ್ತೆ ಕೆದಕಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ನಾನು ಕೂಡ ಆ ಹೋರಾಟದಲ್ಲಿ ಭಾಗಿಯಾಗಿದ್ದೆವು. ಸರ್ಕಾರಕ್ಕೆ ಧೈರ್ಯವಿದ್ದರೆ ನಮ್ಮನ್ನು ಬಂಧಿಸಲಿ ಎಂದು ಸವಾಲೆಸೆದ ಆರ್.ಅಶೋಕ್, ರಾಮಭಕ್ತರ ವಿರುದ್ಧ ದ್ವೇಷಾಸೂಯೆ ಕ್ರಮವನ್ನು ಸಹಿಸೆವು ಎಂದು ಎಚ್ಚರಿಸಿದರು.

ಬ್ರ್ಯಾಂಡ್ ಅಂಬಾಸಿಡರ್

ಸಿಎಂ ಸಿದ್ದರಾಮಯ್ಯ ಅವರು ಒಡೆದಾಳುವುದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಹಿಂದೆ ಬ್ರಿಟಿಷರೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಇದೀಗ ಸಿದ್ದರಾಮಯ್ಯ ಒಡೆದಾಳುವ ರಾಯಭಾರಿಯಾಗಿದ್ದಾರೆ. ಹಿಂದು- ಮುಸ್ಲಿಮರ ಮಧ್ಯೆ ವಿಭಜನೆ ಮಾಡಲು ಪ್ರಯತ್ನಿಸುತ್ತಿದ್ದು, ವೀರಶೈವ ಲಿಂಗಾಯತರನ್ನು ಈ ಹಿಂದೆ ಒಡೆಯಲು ಮುಂದಾಗಿದ್ದರು ಎಂದು ಆರ್.ಅಶೋಕ್ ಛೇಡಿಸಿದರು.

ಬರಪೀಡಿತ ರೈತರಿಗೆ ಪರಿಹಾರ ನೀಡುತ್ತಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ. ಆದರೆ ಅಲ್ಪಸಂಖ್ಯಾತರನ್ನು ಓಲೈಸುವುದಕ್ಕೆ ಹಣದ ಕೊರತೆಯಾಗದು. ಇದು, ಟಿಪ್ಪು ಸುಲ್ತಾನ ಸಂಸ್ಜೃತಿಯಾಗಿದೆ ಎಂದು ಟೀಕಿಸಿದರು.