ಬೆಂಗಳೂರು: ತಿರುಪತಿ ಲಡ್ಡುಗೆ ಕೆಎಂಎಫ್ ತುಪ್ಪ ಸರಬರಾಜು ನಿಂತುಹೋಗಿರುವ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆದಿದೆ.
ಚುನಾವಣೆಗೂ ಮುನ್ನ ನಂದಿನಿಯನ್ನು ದುರುಪಯೋಗ ಪಡಿಸಿಕೊಂಡ ಕಾಂಗ್ರೆಸ್ ಇಂದು ನಂದಿನಿಯ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ. ನಂದಿನಿಗೆ ರಾಜಕೀಯ ಸ್ಪರ್ಶ ನೀಡಿದ ಪರಿಣಾಮ ಕೇರಳ ಮಾರುಕಟ್ಟೆಯನ್ನು ನಂದಿನಿ ಈಗಾಗಲೇ ಕಳೆದುಕೊಂಡಿದೆ ಎಂದು ಬಿಜೆಪಿ ಟಿಕಿಸಿದೆ.
ಇದೀಗ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸುವ ಮೂಲಕ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದೆ. ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರಕ್ಕೆ ಬಂದಾಗ ಲಾಭ-ನಷ್ಟದ ಲೆಕ್ಕ ಹೇಳುವ ಕಾಂಗ್ರೆಸ್ ಇದೇ ಸೂತ್ರವನ್ನು ಇತರ ಧರ್ಮಗಳಿಗೆ ಅನ್ವಯಿಸಲು ಒಪ್ಪುವುದಿಲ್ಲ. ಹಿಂದೂಗಳೆಡೆಗೆ ತಾತ್ಸಾರ ತಮ್ಮ ಜಾತ್ಯತೀತ ಸೂತ್ರ ಎಂಬುದನ್ನು ಸಿದ್ದರಾಮಯ್ಯ ಅವರು ಈಗ ಮತ್ತೆ ರುಜುವಾತು ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಈ ಟೀಕೆಗೆ ಪ್ರತಿಯಾಗಿ, ನಮ್ಮ ಹೆಮ್ಮೆಯ ’ನಂದಿನಿ’ಗೆ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವಿದೆ, ಉತ್ತಮ ಹೆಸರಿದೆ. ಗುಣಮಟ್ಟದಲ್ಲೂ ರಾಜಿಯಾಗುವುದಿಲ್ಲ, ಬೆಲೆಯಲ್ಲೂ ರಾಜಿಯಾಗುವುದಿಲ್ಲ. ಟೆಂಡರ್ ಪಡೆಯಬೇಕು ಎಂಬ ಒಂದೇ ಉದ್ದೇಶಕ್ಕಾಗಿ ಬೆಲೆಯಲ್ಲಿ ರಾಜಿ ಮಾಡಿಕೊಂಡು ನಷ್ಟಕ್ಕೆ ಗುರಿಯಾಗುವ ಅಗತ್ಯವಿಲ್ಲ. ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಯಾವ ಟೆಂಡರ್ ಕೈತಪ್ಪಿದರೂ ನಷ್ಟವಾಗುವುದಿಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.